×
Ad

ಕುಡಿಯಲು ನೀರು ಒದಗಿಸಲು ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋದ ನಗರ ವಾಸಿ

Update: 2017-12-15 17:27 IST

ಚಿಕ್ಕಮಗಳೂರು, ಡಿ.15: ಕಳೆದ 4-5 ತಿಂಗಳಿಂದ ತಮ್ಮ ಮನೆಗೆ ಕುಡಿಯಲು ನೀರು ನೀಡದೇ ಅಲದಾಡಿಸುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ದ ಬೇಸತ್ತ ವ್ಯಕ್ತಿಯೊಬ್ಬರು ಸ್ಥಳೀಯ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.

ನಗರಸಭಾ ವ್ಯಾಪ್ತಿಯ ದಂಟರಮಕ್ಕಿ ಬಡಾವಣೆಯ ವಾರ್ಡ್ ನಂ.22ರಲ್ಲಿ ವಾಸವಿರುವ ಡಿ.ಎನ್.ಚಂದ್ರಶೇಖರ್ ನಲ್ಲಿ ಕಂದಾಯವನ್ನು ಸಮಯಕ್ಕೆ ಸರಿಯಾಗ ಪಾವತಿಸುತ್ತಾ ಬಂದಿದ್ದರೂ ಅವರ ಮನೆಗೆ ನೀರು ಸರಬರಾಜು ಮಾಡದೇ ಇರುವ ಬಗ್ಗೆ ಚಂದ್ರಶೇಖರ್ ಈಗ ನ್ಯಾಯಾಲಾಯದ ಮೊರೆ ಹೋಗಿದ್ದಾರೆ.

ಚಂದ್ರಶೇಖರ್ ವಾಸವಿರುವ ಮನೆ ಹಾಗೂ ಅಕ್ಕಪಕ್ಕದ ಮನೆಗಳಿಗೆ ಈ ಹಿಂದೆ ನಗರಸಭೆ ನೀರು ನಗರಸಭೆ ನೀರು ಸರಬರಾಜು ಮಾಡುತ್ತಿತ್ತು. ಆದರೆ, ನಲ್ಲಿ ಸಂಪರ್ಕದ ಮುಖ್ಯ ಪೈಪುಗಳನ್ನು ಬದಲಾಯಿಸಲು ಹಳೆಯ ಮುಖ್ಯ ಪೈಪ್‍ಅನ್ನು ನಗರಸಭಾ ನೌಕರರು ತೆರವುಗೊಳಿಸಿ ನೂತನ ಪೈಪ್ ಅಳವಡಿಸಿದ್ದಾರೆ. ಇತರೆ ಮನೆಗಳಿಗೆ ಕುಸಿಯುವ ನೀರಿನ ಸಂಪರ್ಕವನ್ನು ಪನಸ್ಥಾಪಿಸಿದ ನಗರಸಭಾ ನೌಕರರು ಚಂದ್ರಶೇಖರ್ ರವರ ಮನೆಯ ನೀರಿನ ಸಂಪರ್ಕ ಮಾತ್ರ ಪುನಸ್ಥಾಪಿಸಿರುವುದಿಲ್ಲ.

ಇದರ ಬಗ್ಗೆ ಚಂದ್ರಶೇಖರ್ ನಗರಸಭೆಗೆ ದೂರು ಸಲ್ಲಿಸಿದ್ದಾರೆ. ಆದರೆ,ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಮ್ಮ ಕುಟುಂಬದಲ್ಲಿ 10 ಮಂದಿ ಇದ್ದು ವಯಸ್ಸಾದ ಹಿರಿಯ ಸಹೋದರ ಪಾರ್ಶವಾಯು ಪೀಡಿತರಾಗಿ ನರಳುತ್ತಿದ್ದಾರೆಂದು ತಿಳಿಸಿ ನಲ್ಲಿ ಕಂದಾಯವನ್ನು ನಿರಂತರವಾಗಿ ನೀಡುತ್ತಾ ಬಂದಿದ್ದರೂ ನಲ್ಲಿ ಸಂಪರ್ಕವನ್ನು ಪುನಃಸ್ಥಾಪಿಸದಿರುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳ ಬೇಕೆಂದು ಆಗ್ರಹಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. 
ಇದರಿಂದ ಚಂದ್ರಶೇಖರ್ ಸ್ಥಳೀಯ 3ನೇ ಹೆಚ್ಚುವರಿ ಸಿವಿಲ್ ಜೆ.ಎಂ.ಎಫ್.ಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಚಂದ್ರಶೇಖರ್ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಚಿಕ್ಕಮಗಳೂರು ನಗರಸಭಾ ಆಯುಕ್ತರಿಗೆ 2017ರ ನವೆಂಬರ್ 17ರಂದು  ಆದೇಶ ನೀಡಿ ಅರ್ಜಿದಾರರಾದ ಚಂದ್ರಶೇಖರ್ ರವರಿಗೆ ನಲ್ಲಿ ಸಂಪರ್ಕ ನೀಡಲು ಆದೇಶಿಸಿದೆ.

ಆದೇಶವನ್ನು ಪಾಲಿಸದ ನಗರಸಭಾ ಆಯುಕ್ತರ ವಿರುದ್ಧ ಈಗ ಚಂದ್ರಶೇಖರ್ ರವರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದು ಪ್ರಕರಣವನ್ನು ಕೈಗೆತ್ತಿಕೊಂಡಿರುವ 3ನೇ ಹೆಚ್ಚುವರಿ ಸಿವಿಲ್ ಜೆ.ಎಂ.ಎಫ್.ಸಿ ನ್ಯಾಯಾಲಯ ನಗರಸಭಾ ಆಯುಕ್ತರು ಡಿಸೆಂಬರ್ 16 ರಂದು ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ನೀಡಿದೆ. ಸ್ಥಳೀಯ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪವೇ ತಮ್ಮ ಕುಟುಂಬಕ್ಕೆ ನೀರಿನ ಸಂಪರ್ಕ ನೀಡದಿರಲು ಕಾರಣ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News