ಪ್ರಚೋದನಾಕಾರಿ ಭಾಷಣಗಳಿಗೆ ಕಡಿವಾಣ ಹಾಕಿ : ಎಸ್‍ಐಒ ಒತ್ತಾಯ
ಮಡಿಕೇರಿ,ಡಿ.15 :ದೇಶದಲ್ಲಿ ಪ್ರಚೋದನಾಕಾರಿ ಭಾಷಣಗಳಿಂದಾಗಿ ಕೋಮು ದ್ವೇಷ ಭುಗಿಲೇಳುತ್ತಿದ್ದು, ಯುವ ಸಮೂಹ ಹಾದಿ ತಪ್ಪುವುದನ್ನು ತಪ್ಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅಭಿಪ್ರಾಯಪಟ್ಟಿರುವ ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಸಂಘಟನೆಯ ಕೊಡಗು ಜಿಲ್ಲಾ ಘಟಕ, ಡಿ.17 ರಂದು ಸಂಘಟನೆ ವತಿಯಿಂದ ನಗರದಲ್ಲಿ ಸೌಹಾರ್ದ ಸಮಾವೇಶವನ್ನು ಆಯೋಜಿಸಿರುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ತೌಸೀಪ್ ಅಹ್ಮದ್, ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಕೋಮು ದ್ವೇಷದ ಭಾಷಣಗಳು ದೇಶಕ್ಕೆ ಮಾರಕ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಡಿ.17 ರಂದು “ಹಲವು ಧರ್ಮ, ಒಂದು ಭಾರತ” ಎಂಬ ಘೋಷ ವಾಕ್ಯದೊಂದಿಗೆ ಸೌಹಾರ್ದ ಸಮಾವೇಶ ನಡೆಯಲಿದೆ ಎಂದರು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮವನ್ನು ಮಡಿಕೇರಿಯ ಸಿಎಸ್‍ಐ ಶಾಂತಿ ಚರ್ಚ್‍ನ ರೆ.ಫಾ.ಅಮೃತ್ ರಾಜ್ ಉದ್ಘಾಟಿಸಲಿದ್ದು, ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಎ.ಹೆಚ್.ನಹಾಸ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ರಾಜ್ಯಾಧ್ಯಕ್ಷರಾದ ಮೊಹಮ್ಮದ್ ರಫೀಕ್ ಬೀದರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ.ಸತೀಶ್ ವಿ.ಶಿವಮಲ್ಲಯ್ಯ, ಸೋಲಿಡಾರಿಟಿ ಯೂತ್ ಮೂವ್‍ಮೆಂಟ್ ರಾಜ್ಯ ಸಲಹಾ ಸಮಿತಿ ಸದಸ್ಯರಾದ ಎಂ.ಶೌಕತ್ ಅಲಿ ಹಾಗೂ ಪ್ರಗತಿಪರ ಚಿಂತಕರಾದ ವಿ.ಪಿ.ಶಶಿಧರ್ ಪಾಲ್ಗೊಳ್ಳಲಿದ್ದಾರೆ ಎಂದು ತೌಸೀಪ್ ಅಹ್ಮದ್ ತಿಳಿಸಿದರು.
ಲವ್ ಜಿಹಾದ್ ಆರೋಪ ಮಾಡಿ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕ್ರೂರ ಕೃತ್ಯವನ್ನು ಬೆಂಬಲಿಸುವವರು ಕೂಡ ಇದ್ದಾರೆ. ಕೊಲೆ ಮಾಡಿದಾತನ ಕುಟುಂಬಕ್ಕೆ ಹಣ ಸಂಗ್ರಹಿಸಿ ನೀಡಲಾಗಿದ್ದು, ಇದು ಹೀನಾಯ ಬೆಳವಣಿಗೆಯಾಗಿದೆ ಎಂದು ತೌಸೀಪ್ ಅಹ್ಮದ್ ಟೀಕಿಸಿದರು.
ಈ ರೀತಿಯ ಕೃತ್ಯಗಳು ಮತ್ತು ಕೋಮು ದ್ವೇಷದ ಪ್ರಚೋದನಾಕಾರಿ ಭಾಷಣಗಳಿಂದಾಗಿ ಯುವ ಸಮೂಹ ಹಾದಿ ತಪ್ಪುವ ಆತಂಕ ಎದುರಾಗಿದ್ದು, ಸೌಹಾರ್ದತೆಯ ಸಂದೇಶ ಸಾರುವ ಕಾರ್ಯವಾಗಬೇಕಾಗಿದೆ. ಈ ಕಾರಣದಿಂದ ಸಂಘಟನೆ ಪ್ರತಿವರ್ಷ ಸಮಾವೇಶವನ್ನು ನಡೆಸುತ್ತಿದೆ ಎಂದರು. ಕೆಲವು ಸಂಘಟನೆಗಳ ಅಜೆಂಡಾವನ್ನು ಇತರರ ಮೇಲೆ ಹೇರುವ ಪ್ರಯತ್ನಗಳು ಖಂಡಿಸುವುದಾಗಿ ತಿಳಿಸಿದರು.
ಕೊಡಗು ಅತ್ಯಂತ ಶಾಂತಿ ಹಾಗೂ ಸೌಹಾರ್ದತೆಯ ಜಿಲ್ಲೆಯಾಗಿದ್ದು, ಕೊಡವ ಭಾಷೆ ಮತ್ತು ಸಂಸ್ಕೃತಿ ಉಳಿಯಬೇಕೆನ್ನುವ ಮನೋಭಾವವನ್ನು ನಾವು ಹೊಂದಿದ್ದೇವೆ ಎಂದು ತೌಸೀಪ್ ಅಹ್ಮದ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಝರುದ್ದೀನ್, ಜಿಲ್ಲಾ ಸಂಚಾಲಕರಾದ ಸಿ.ಹೆಚ್.ಅಪ್ಸರ್ ಹಾಗೂ ಸದಸ್ಯರಾದ ಎಂ.ಹೆಚ್.ಮೊಹಮ್ಮದ್ ಉಪಸ್ಥಿತರಿದ್ದರು.