×
Ad

ಸಿದ್ದಲಿಂಗಪುರದಲ್ಲಿ ಅಕ್ರಮ ಗಣಿಗಾರಿಕೆ ಆರೋಪ : ಪ್ರತಿಭಟನೆಯ ಎಚ್ಚರಿಕೆ

Update: 2017-12-15 17:32 IST

ಮಡಿಕೇರಿ,ಡಿ.15 :ಸೋಮವಾರಪೇಟೆ ತಾಲ್ಲೂಕಿನ ಗೋಣಿಮರೂರು ಸಿದ್ದಲಿಂಗಪುರದಲ್ಲಿ ಕೇರಳದ ಕಣ್ಣೂರು ಮೂಲದ ವ್ಯಕ್ತಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಮೀಸಲು ಅರಣ್ಯ ಪ್ರದೇಶ ಒತ್ತುವರಿಯಾಗಿದೆ ಎಂದು ನೂತನ ಕೊಡಗು ಪರಿಸರ ಸಂರಕ್ಷಣಾ ಹೋರಾಟ ಆಕ್ಷನ್ ಕಮಿಟಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷರಾದ ಕಿಶೋರ್ ಕೆ.ವಾಸು, ಮುಂದಿನ 15 ದಿನಗಳೊಳಗೆ ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಕಳೆದ ಹಲವು ತಿಂಗಳುಗಳಿಂದ ನಿಯಮ ಬಾಹಿರವಾಗಿ ಮೀಸಲು ಅರಣ್ಯ ಭಾಗವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಹಾಗೂ ಪರಿಸರ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. 

ಗಣಿಗಾರಿಕೆಯಿಂದಾಗಿ ಅಪಾಯ ಸಂಭವಿಸುವ ಸಾಧ್ಯತೆಗಳಿದ್ದು, ವನ್ಯಜೀವಿಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯವನ್ನು ತೊರೆಯುತ್ತಿರುವ ಪ್ರಾಣಿಗಳು ಗ್ರಾಮಕ್ಕೆ ಲಗ್ಗೆ ಇಟ್ಟು ರೈತರು ಬೆಳೆದ ಫಸಲನ್ನು ನಾಶ ಮಾಡುತ್ತಿವೆ. ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಪಕ್ಕದಲ್ಲೇ ದೇವಾಲಯವೊಂದಿದ್ದು, ಹಾನಿಯಾಗುವ ಆತಂಕವಿದೆ. ಇದೇ ಭಾಗದಲ್ಲಿದ್ದ ಶಿವನ್ ಎಂಬುವವರಿಗೆ ಸೇರಿದ ಮನೆಯನ್ನು ಹಕ್ಕುಪತ್ರವಿದ್ದರೂ ಯಾವುದೇ ಪರಿಹಾರ ನೀಡದೆ ಒಡೆದು ಹಾಕಲಾಗಿದೆ. ಗಣಿಗಾರಿಕೆ ಪ್ರದೇಶದಲ್ಲಿದ್ದ ಗಂಧದ ಮರಗಳನ್ನು ಕೂಡ ಕಡಿದು ಹಾಕಲಾಗಿದೆ ಎಂದು ಕಿಶೋರ್ ಕೆ.ವಾಸು ಆರೋಪಿಸಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ಸಂದರ್ಭ ಸೂಕ್ತ ಕ್ರಮದ ಭರವಸೆ ದೊರೆಯಿತ್ತಾದರೂ ಇಲ್ಲಿಯವರೆಗೆ ಯಾವುದೇ ಅಧಿಕಾರಿ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಮುಂದಿನ 15 ದಿನಗಳೊಳಗೆ ಗಣಿಗಾರಿಕೆಯನ್ನು ಸ್ಥಗಿತಗೊಳಿಸದಿದ್ದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.  
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಹೆಚ್.ಎ.ಷಂಶುದ್ದೀನ್, ಸದಸ್ಯರುಗಳಾದ ಪಿ.ಎಸ್.ರವಿ ಹಾಗೂ ಕೆ.ಟಿ.ಶಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News