×
Ad

ಚುನಾವಣೆಗಾಗಿ ಮಾತ್ರ ಮುಸ್ಲೀಮರನ್ನು ಬಳಸಿ ದೂರವಿಡುವ ಚಾಳಿ ಕಾಂಗ್ರೆಸ್‍ನದ್ದು: ಶಬ್ಬೀರ್

Update: 2017-12-15 17:33 IST

ಮೂಡಿಗೆರೆ ಡಿ.15: ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲೀಮರನ್ನು ಚುನಾವಣೆಗೆ ಮಾತ್ರ ಬಳಸಿ ಚುನಾವಣೆ ಮುಗಿದ ನಂತರ ದೂರ ಇಡಲಾಗುತ್ತದೆ. ಇದರಿಂದ ಬೇಸತ್ತ ಮುಸ್ಲಿಂಮರು ಸಾಮೂಹಿಕವಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ಬಯಸಿದ್ದಾರೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ಕ್ಷೇತ್ರ ಸಮಿತಿ ಅಧ್ಯಕ್ಷ ಶಬ್ಬೀರ್ ಅಹಮ್ಮದ್ ಬೇಗ್ ತಿಳಿಸಿದ್ದಾರೆ.

  ಅವರು ಶುಕ್ರವಾರ ಈ ಬಗ್ಗೆ ಹೇಳಿಕೆ ನೀಡಿದ್ದು, ಮೂಡಿಗೆರೆ ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳ ತಾರಕಕ್ಕೇರಿದೆ. ಇತ್ತೀಚೆಗೆ ಕಾಂಗ್ರೆಸ್‍ನ ಅಲ್ಪಸಂಖ್ಯಾತರು ಪ್ರತ್ಯೇಕ ಸಭೆ ನಡೆಸಿದಾಗ ಕಾಂಗ್ರೆಸ್‍ನಲ್ಲಿ ಮುಸ್ಲಿಂಮರ ಬಗ್ಗೆ ಇರುವ ಅಗೌರವ ಮತ್ತು ಸರಕಾರವಿದ್ದರೂ ರಕ್ಷಣೆ ಇಲ್ಲ. ಚುನಾವಣಾ ರಾಜಕೀಯಕ್ಕಾಗಿ ಮಾತ್ರ ಮುಸ್ಲಿಂಮರನ್ನು ಬಳಸಿ ಬಳಿಕ ಯಾವುದೇ ಹುದ್ದೆಗಳಿಗೂ ನೇಮಕಗೊಳಿಸದೇ ವಂಚಿಸಲಾಗುತ್ತಿದೆ. 

  ಕೋಮುವಾದಿಗಳ ದೌರ್ಜನ್ಯ ಹೆಚ್ಚಾದರೂ ಕಾಂಗ್ರೆಸ್ ನಾಯಕರು ಇದನ್ನು ಪ್ರಶ್ನಿಸುತ್ತಿಲ್ಲ ಎಂದು ಮುಸ್ಲಿಂ ಕಾರ್ಯಕರ್ತರು ಒಕ್ಕೂರಲಿನಿಂದ ಸಭೆಯನ್ನು ಬಹಿಷ್ಕರಿಸಿ ಹೊರ ಬಂದಿದ್ದಾರೆ. ಇದು ಪತ್ರಿಕೆಗಳಲ್ಲೂ ಸುದ್ಧಿಯಾಗಿದೆ. ಸಭೆ ಭಹಿಷ್ಕರಿಸಿ ಹೊರ ಬಂದ ಮುಸ್ಲಿಂ ಕಾರ್ಯಕರ್ತರು ಜೆಡಿಎಸ್ ಪರ ಒಲವು ತೋರಿದ್ದಾರೆ ಎಂದು ತಿಳಿಸಿದ್ದಾರೆ.
  ಬಾಬಾ ಬುಡನ್‍ಗಿರಿ ಸಮಸ್ಯೆಯನ್ನು ಹಿಂದಿನ ಕಾಂಗ್ರೆಸ್ ಸರಕಾರದ ಅವದಿಯಲ್ಲೇ ಹುಟ್ಟು ಹಾಕಲಾಗಿದೆ. ಚುನಾವಣಾ ರಾಜಕೀಯಕ್ಕೋಸ್ಕರ ಸಮಸ್ಯೆಯನ್ನು ಜೀವಂತವಾಗಿರಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅದೇ ರೀತಿ ಹುಬ್ಬಳ್ಳಿಯ ಈದ್ಗಾ ಮೈಧಾನದಲ್ಲೂ ಪ್ರತಿ ವರ್ಷ ಗಲಭೆ ಹುಟ್ಟು ಹಾಕಿ, ಕಾಂಗ್ರೆಸ್ ಹಾಗೂ ಬಿಜೆಪಿ ಚುನಾವಣಾ ರಾಜಕೀಯ ಮಾಡುತ್ತಿದ್ದವು ಎಂದು ಹೇಳಿದ್ದಾರೆ.

  ಹೆಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದ ಅವದಿಯಲ್ಲಿ ಒಂದು ವಾರದಲ್ಲೇ ಸಮಸ್ಯೆಯನ್ನು ಬಗೆಹರಿಸಲಾಯಿತು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅತ್ಯಧಿಕ ಮತಗಳಿಸಿ ಹೆಚ್ಚಿನ ಸ್ಥಾನ ಪಡೆದು ಅಧಿಕಾರ ಚುಕ್ಕಾಣಿ ಹಿಡಿದು, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ. ಬಿ.ಬಿ.ನಿಂಗಯ್ಯ ಸಚಿವರಾಗಲಿದ್ದಾರೆ. ಬಾಬ ಬುಡನ್‍ಗಿರಿ ಸಮಸ್ಯೆಯನ್ನು ಒಂದೇ ತಿಂಗಳಲ್ಲಿ ಇತ್ಯರ್ಥಪಡಿಸಲಿದ್ದಾರೆ. ಅದಕ್ಕಾಗಿ ಮುಸ್ಲಿಂಮರು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರ ತರಲು ಅಗತ್ಯವಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News