×
Ad

ಶಿವಮೊಗ್ಗ; ಪಾವತಿಯಾಗದ ಬಾಡಿಗೆ : ಮಳಿಗೆಗಳಿಗೆ ಬೀಗ ಜಡಿಯಲು ಮುಂದಾದ ಪಾಲಿಕೆ ಆಡಳಿತ

Update: 2017-12-15 18:02 IST

ಶಿವಮೊಗ್ಗ, ಡಿ. 14: ನಗರದ ವಿವಿಧೆಡೆ ಮಹಾನಗರ ಪಾಲಿಕೆ ಒಡೆತನಕ್ಕೆ ಸೇರಿದ ವಾಣಿಜ್ಯ ಸಂಕೀರ್ಣಗಳಲ್ಲಿ ಕಳೆದ ಹಲವು ವರ್ಷಗಳಿಂದ ಬಾಡಿಗೆ ಬಾಕಿ ಉಳಿಸಿಕೊಂಡ ಮಳಿಗೆಗಳಿಗೆ ಬೀಗ ಜಡಿಯುವ ಕಾರ್ಯವನ್ನು ಪಾಲಿಕೆ ಆಡಳಿತ ಶುಕ್ರವಾರದಿಂದ ನಡೆಸಲಾರಂಭಿಸಿದೆ. 

ಹಲವು ಮಳಿಗೆಗಳ ಮಾಲೀಕರು ಕಳೆದ ಹಲವು ವರ್ಷಗಳಿಂದ ಲಕ್ಷಾಂತರ ರೂ. ಮೊತ್ತದ ಬಾಡಿಗೆ ಬಾಕಿ ಉಳಿಸಿಕೊಂಡಿದ್ದರು. ಕೆಲವರು ನಿಯಮಕ್ಕೆ ವಿರುದ್ದವಾಗಿ ಒಳ ಬಾಡಿಗೆ ಕೂಡ ಕೊಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ನಡುವೆ ಬಾಡಿಗೆ ಪಾವತಿಗೆ ಸಂಬಂಧಿಸಿದಂತೆ ತಗಾದೆ ಏರ್ಪಟ್ಟು ಕೆಲವರು ನ್ಯಾಯಾಲಯದ ಮೊರೆ ಕೂಡ ಹೋಗಿದ್ದರು. 

ನ್ಯಾಯಾಲಯವು ಬಾಡಿಗೆ ಪಾವತಿ ಮಾಡುವಂತೆ ಸೂಚಿಸಿತ್ತು. ಆದಾಗ್ಯೂ ಕೆಲ ಬಾಡಿಗೆದಾರರು ಬಾಡಿಗೆ ಪಾವತಿ ಮಾಡಿರಲಿಲ್ಲ. ಸ್ಥಾಯಿ ಸಮಿತಿಯೊಂದರ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿತ್ತು. ಮಳಿಗೆಗಳಿಂದ ಬಾಡಿಗೆ ವಸೂಲಿ ಮಾಡುವಲ್ಲಿ ವಿಫಲರಾದ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳನ್ನೇ ಹೊಣೆಯನ್ನಾಗಿ ಮಾಡಲು ನಿರ್ಧರಿಸಲಾಗಿತ್ತು. 

ಇದರಿಂದ ಎಚ್ಚೆತ್ತುಕೊಂಡ ಪಾಲಿಕೆಯ ಸಂಬಂಧಿಸಿದ ವಿಭಾಗದ ಅಧಿಕಾರಿ, ನೌಕರರು ಸಮರ್ಪಕವಾಗಿ ಬಾಡಿಗೆ ಪಾವತಿಸದ ಮಳಿಗೆಗಳಿಗೆ ಬೀಗ ಜಡಿಯಲು ಮುಂದಾದರು. ಈ ವೇಳೆ ಕೆಲಸ ಬಾಡಿಗೆದಾರರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮಾನವೀಯತೆ ದೃಷ್ಟಿಯಿಂದ ಬಾಡಿಗೆ ಪಾವತಿಗೆ ಕಾಲಾವಾಕಾಶ ನೀಡಿ, ಮಳಿಗೆಗಳಿಗೆ ಹಾಕಲಾಗಿದ್ದ ಬೀಗಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ನಿಗದಿತ ಅವಧಿಯೊಳಗೆ ಬಾಡಿಗೆ ಪಾವತಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಬೀಗ ಜಡಿಯಲಾಗುವುದು ಎಂದು ವರ್ತಕರಿಗೆ ಪಾಲಿಕೆ ಆಡಳಿತ ಎಚ್ಚರಿಕೆ ನೀಡಿದೆ. 

ಬಾಕಿ: ಪಾಲಿಕೆ ಆಡಳಿತಕ್ಕೆ ಮೂರುವರೆ ಕೋಟಿ ರೂ.ಗೂ ಹೆಚ್ಚು ಬಾಡಿಗೆ ಬಾಕಿ ಬರಬೇಕಾಗಿದೆ. ಈ ಪೈಕಿ ದೇವರಾಜ ಅರಸು ವಾಣಿಜ್ಯ ಸಂಕೀರ್ಣವೊಂದರಿಂದಲೇ 1.54 ಕೋಟಿ ರೂ. ಬಾಡಿಗೆ ಬಾಕಿ ಬರಬೇಕಾಗಿದೆ. ಇದೇ ಸಂಕೀರ್ಣದಲ್ಲಿರುವ ಸರ್ಕಾರಿ ಸ್ವಾಮ್ಯದ ಕೆಎಸ್‍ಎಫ್‍ಸಿ ಸಂಸ್ಥೆಯು ಕೂಡ ಸುಮಾರು 1 ಕೋಟಿ ರೂ.ಗಳಷ್ಟು ಬಾಡಿಗೆ ಬಾಕಿ ಉಳಿಸಿಕೊಂಡಿದೆ!

ಇಂದಿರಾ ಗಾಂಧಿ ಸಂಕೀರ್ಣ, ಜೆ.ಹೆಚ್.ಪಟೇಲ್ ವಾಣಿಜ್ಯ ಸಂಕೀರ್ಣ, ಗಾಂಧಿನಗರ, ಬಿ.ಹೆಚ್.ರಸ್ತೆ, ಕುಂಬಾರಗುಂಡಿ, ಜೈಲ್ ರಸ್ತೆ, ಖಾಸಗಿ ಬಸ್ ನಿಲ್ದಾಣ, ಫುಡ್‍ಕೋರ್ಟ್ ಮತ್ತೀತರೆಡೆ ಪಾಲಿಕೆಗೆ ಸೇರಿದ 385 ಮಳಿಗೆಗಳಿವೆ. ಕೆಲ ವರ್ತಕರು ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿ ಮಾಡದಿರುವುದು ಕಂಡುಬಂದಿದೆ. ಇದರಿಂದ ಇದೀಗ ಮಳಿಗೆಗಳಿಗೆ ಬೀಗ ಜಡಿಯುವ ಕಾರ್ಯಕ್ರಮವನ್ನು ಪಾಲಿಕೆ ಆಡಳಿತ ಆರಂಭಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News