ಶಿವಮೊಗ್ಗದಲ್ಲಿ ನೀಟ್ ಕೇಂದ್ರ ತೆರೆಯಲು ಆಗ್ರಹ

Update: 2017-12-15 12:45 GMT

ಶಿವಮೊಗ್ಗ, ಡಿ. 15: ಮೆಡಿಕಲ್ ಪ್ರವೇಶ ದೇಶಾದ್ಯಂತ ಏಕರೂಪದ ನೀಟ್ ಪರೀಕ್ಷೆ ನಡೆಸಲಾಗುತ್ತಿದ್ದು, ಶಿವಮೊಗ್ಗದಲ್ಲಿಯೂ ನೀಟ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಆಗ್ರಹಿಸಿ ಎನ್‍ಎಸ್‍ಯುಐ ಕಾರ್ಯಕರ್ತರು ಶುಕ್ರವಾರ ಡಿ.ಸಿ. ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು. 

ಮೆಡಿಕಲ್ ಪದವಿ ಪ್ರವೇಶಕ್ಕೆ ನಡೆಸುವ ನೀಟ್ ಪರೀಕ್ಷೆಗೆ ರಾಜ್ಯದಲ್ಲಿ ಕೇವಲ 5 ಕೇಂದ್ರಗಳಿವೆ. ಶಿವಮೊಗ್ಗವನ್ನೂ ಕೇಂದ್ರವನ್ನಾಗಿ ಮಾಡಬೇಕು. ಶಿವಮೊಗ್ಗವು ದಿನೇ ದಿನೇ ಶೈಕ್ಷಣಿಕವಾಗಿ  ಪ್ರಗತಿ ಸಾಧಿಸುತ್ತಿರುವ ಜಿಲ್ಲೆಯಾಗಿದ್ದು, ಈಗಾಗಲೇ ಇಲ್ಲಿರುವ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಭೋಧನಾ ವ್ಯವಸ್ಥೆಯಿಂದ ಜಿಲ್ಲೆ ಹೆಸರು ಮಾಡಿದೆ. 

ರಾಜ್ಯದ ವಿವಿಧೆಡೆಯಿಂದ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಆದರೆ, ವೈದ್ಯಕೀಯ ಕೋರ್ಸ್‍ಗಾಗಿ ಪ್ರವೇಶ ಪರೀಕ್ಷಾ ಕೇಂದ್ರಗಳು ರಾಜ್ಯದಲ್ಲಿ ಕೇವಲ ದಾವಣಗೆರೆ, ಬೆಳಗಾವಿ, ಗುಲ್ಬರ್ಗಾ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ಇದೆ. ನೀಟ್ ಪರೀಕ್ಷೆ ಬರೆಯುವವರು ಈ ಐದು ಕೇಂದ್ರಗಳಲ್ಲಿ ಯಾವುದಾದರೂ ಒಂದು ಕೇಂದ್ರವನ್ನು ಮಾತ್ರ ಆಯ್ಕೆಮಾಡಿಕೊಳ್ಳಬೇಕು ಎಂದು ದೂರಿದರು.

ಶಿವಮೊಗ್ಗದಲ್ಲಿ ಈಗಾಗಲೇ ಕೆಪಿಎಸ್‍ಸಿ ಸಹ ವಿಭಾಗೀಯ ಕಚೇರಿ ತೆರೆದಿದ್ದು, ಲಕ್ಷಾಂತರ ಮಂದಿಗೆ ಅನುಕೂಲವಾಗುತ್ತಿದೆ. ಹಾಗೆಯೇ ನೀಟ್‍ಗೆ ಶಿವಮೊಗ್ಗ ಜಿಲ್ಲೆಯನ್ನೂ ಪರೀಕ್ಷಾ ಕೇಂದ್ರವನ್ನಾಗಿ ಮಾಡಬಹುದು. ಜಿಲ್ಲಾಧಿಕಾರಿ ಈ ಬಗ್ಗೆ ರಾಷ್ಟ್ರೀಯ ಅರ್ಹತಾ ಪರೀಕ್ಷಾ ಮಂಡಳಿಗೆ ಶಿಫಾರಸ್ಸು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಎಚ್.ಎನ್. ಬಾಲಾಜಿ, ವಿಕಾಸ್ ನಾಡಿಗ್, ವಿಜಯ್, ಎಸ್.ಪ್ರಮೋದ್, ಅನಿಲ್ ಆಚಾರ್, ಶರವಣ, ಧನಂಜಯ ಸೇರಿದಂತೆ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News