×
Ad

ಜೀವನದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದರಿಂದ ನಮ್ಮಗಳ ಆತ್ಮವಿಶ್ವಾಸ ಹೆಚ್ಚಾಗುತ್ತದೆ: ಡಿ.ಎಸ್. ರಮೇಶ್

Update: 2017-12-15 18:50 IST

ದಾವಣಗೆರೆ, ಡಿ. 15: ಜೀವನದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದರಿಂದ ನಮ್ಮಗಳ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದರು. ನಗರದ ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಪದವಿಪೂರ್ವ ಶಿಕ್ಷಣ ಇಲಾಖೆ, ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಬಾಲಕರ ವಿಭಾಗಮಟ್ಟದ 3 ದಿನಗಳ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಮೊದಲ ಎನ್‍ಎಸ್‍ಎಸ್ ಶಿಬಿರಗಳು ಗ್ರಾಮೀಣ ಭಾಗಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಇದರಿಂದ ಅಲ್ಲಿನ ಜನರ ಆಚಾರ ವಿಚಾರ, ನಡೆ ನುಡಿ, ಸಂಸ್ಕೃತಿಯನ್ನು ವಿದ್ಯಾರ್ಥಿಗಳು ತಿಳಿಯಲು ಸಾಧ್ಯವಾಗುತ್ತಿತ್ತು. ಆದರೆ, ಇಂದು ನಗರ ಪ್ರದೇಶಗಳಲ್ಲೂ ಶಿಬಿರ ನಡೆಯುತ್ತಿರುವುದರಿಂದ ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಬೌದ್ಧಿಕವಾಗಿ ಪ್ರಬುದ್ಧರಾಗಬೇಕು ಎಂದರು.

ವಿದ್ಯಾರ್ಥಿ ಜೀವನದಲ್ಲಿಯೇ ಕೌಶಲ್ಯವನ್ನು ಅಳವಡಿಸಿಕೊಳ್ಳಬೇಕು. ಕೇವಲ ಶಾಲೆಯಲ್ಲಿ ವಿದ್ಯಾರ್ಥಿಗಳು ಓದು ಮತ್ತು ಅಂಕ ಗಳಿಕೆಗೆ ಸೀಮಿತವಾದಲ್ಲಿ ಜೀವನವನ್ನು ಎದುರಿಸುವ ಸಾಮಥ್ರ್ಯವಿಲ್ಲದೆ ಮುಂದಿನ ದಿನಗಳನ್ನು ನಿಭಾಹಿಸುವುದು ಕಷ್ಟಕರವಾಗಲಿದೆ. ಇನ್ನೂ ವಿದ್ಯಾರ್ಥಿ ವಯಸ್ಸಿನಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಇಂತವರಿಗೆ ಆತ್ಮವಿಶ್ವಾಸ ತುಂಬಲು ಇಂತಹ ಶಿಬಿರಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.

ವಿಧಾನ ಪರಿಷತ್‍ನ ಮಾಜಿ ಮುಖ್ಯಸಚೇತಕ ಎ.ಎಚ್. ಶಿವಯೋಗಿ ಸ್ವಾಮಿ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಓದು, ಬರೆ, ಅಂಕ ಪಡೆದು ಪಾಸಾಗುವುದು ಎಂದು ಅರ್ಥೈಸಲಾಗುತ್ತಿದೆ. ಪಾಲಕರು ಇದನ್ನೇ ನಂಬಿದ್ದಾರೆ. ಈ ಭಾವನೆಯನ್ನು ಎಲ್ಲರು ತೊರೆದು ಹಾಕಬೇಕು. ಇತ್ತೀಚೆಗೆ ಓದಿನಿಂದಲ್ಲೇ ಎಲ್ಲವನ್ನು ಸಾಧಿಸಲು ಸಾಧ್ಯ ಎಂದು ತಿಳಿಯುತ್ತಿದ್ದು, ಇದು ತಪ್ಪು. ವಿದ್ಯಾರ್ಥಿಗಲು ಕೌಶಲ್ಯವನ್ನು ಚಟುವಟಿಕೆಯಿಂದ ಕೂಡಿದ್ದಲ್ಲಿ ಏನಾದರೂ ಸಾಧಿಸುವ ಛಲ ಬಂದೇ ಬರುತ್ತದೆ ಎಂದ ಅವರು, ಎಲ್ಲರೂ ಪುಸ್ತಕದ ಶಿಕ್ಷಣಕ್ಕಿಂತ ಬದುಕಿನ ಜ್ಞಾನವನ್ನು ಅರಿಯಬೇಕು. ಜೀವನಕ್ಕೆ ಬೇಕಾಗಿರುವುದು ಅಂಕವಲ್ಲ. ಸಾಮಾನ್ಯ ಜ್ಞಾನ. ಬದುಕಿಗೆ ಬೇಕಾದ ಮೌಲ್ಯಗಳನ್ನು ಹೆಚ್ಚಾಗಿ ತಿಳಿದುಕೊಳ್ಳಬೇಕು. ಇದಕ್ಕಾಗಿ ನಮ್ಮಲ್ಲಿ ಆತ್ಮವಿಶ್ವಾಸ ಬೆಳಸಿಕೊಳ್ಳಬೇಕು. ಜಗತ್ತಿನಲ್ಲಿ ಭಾರತವು ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮಲು ಯುವಕರ ಪಾತ್ರ ಅತೀ ಮುಖ್ಯ. ಇಂತಹ ಶಿಬಿರಗಳು ಸಮಾಜದ ಪರಿವರ್ತನೆ ಮಾಡುವ ಕೇಂದ್ರವಾಗಿ ಬೆಳೆಯಬೇಕು ಎಂದು ಹೇಳಿದರು.

ಈ ನಿಟ್ಟಿನಲ್ಲಿ ಬೋಧಕರು ವಿದ್ಯಾರ್ಥಿಗಳಿಗೆ ಪುಸಕ್ತ ಜೊತೆ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸಬೇಕು. ಸೇವಾ ಮನೋಭಾವನೆ, ತ್ಯಾಗ, ಸದೃಢತೆ, ಆತ್ಮವಿಶ್ವಾಸ, ಸ್ವಾಸ್ಥ್ಯ ಸಮಾಜ ನಿರ್ಮಾಣದ ಗುಣಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಅನಿತಾಬಾಯಿ, ಪಾಲಿಕೆ ಸದಸ್ಯೆ ವಿ. ಅಶ್ವಿನಿ ಪ್ರಶಾಂತ್, ನಿವೃತ್ತ ಪ್ರಾಧ್ಯಾಪಕ ಸಿ.ಎಚ್. ಮುರುಗೇಂದ್ರಪ್ಪ, ಪ್ರಾಚಾರ್ಯ ಎಚ್. ಚಂದ್ರಪ್ಪ, ಶಿಬಿರಾಧಿಕಾರಿ ಆರ್. ಲೋಕೇಶಪ್ಪ, ರಾಜ್ಯ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಪಿ.ಆರ್. ಗಾಯತ್ರಿರೆಡ್ಡಿ, ಸಂತೋಷ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News