‘ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಕಾರ್ಯಾಗಾರ’
ಬೆಳಗಾವಿ, ಡಿ.15: ಸುಪ್ರೀಂಕೋರ್ಟ್ ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ಹಾಗೂ ನಿಯಂತ್ರಣ ಕಾಯ್ದೆ 2014 ಜಾರಿಗೆ ತಂದಿದ್ದು, ರಾಜ್ಯ ಸರಕಾರವು ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ಹಾಗೂ ನಿಯಂತ್ರಣ ನಿಯಮಗಳು 2016ನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಝಿಯಾವುಲ್ಲಾ ತಿಳಿಸಿದ್ದಾರೆ.
ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ಹಾಗೂ ನಿಯಂತ್ರಣ ಕಾಯ್ದೆ, ನಿಯಮಗಳು ಕುರಿತು ನಗರ ಸ್ಥಳೀಯ ಸಂಸ್ಥೆಗಳ ಮೇಯರ್, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಟ್ಟಣ ಬೀದಿ ಬದಿ ವ್ಯಾಪಾರ ಸಮಿತಿಯ ಸದಸ್ಯರು, ಯೋಜನೆಯಅನುಷ್ಠಾನದ ಪಾಲುದಾರರಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾಯ್ದೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಲ್ಲಿದ್ದು, ಈ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳಷ್ಟೆ ಅಲ್ಲದೇ ಬೀದಿ ಬದಿ ವ್ಯಾಪಾರಿಗಳಿಗೆ ಎದುರಾಗುವ ತೊಂದರೆ, ಅವುಗಳ ನಿವಾರಣೆಗೆ ತಮ್ಮ ಸಹಕಾರ, ಸಲಹೆ ಅವಶ್ಯಕವಾಗಿದೆ ಎಂದು ಅವರು ಹೇಳಿದರು.
ಬೀದಿ ಬದಿ ವ್ಯಾಪಾರಿಗಳ ಕಾಯ್ದೆ ಜಾರಿಯಾಗಿರುವುದರಿಂದ ಇದು ತಮ್ಮ ಹಕ್ಕಾಗಿದೆ. ತಾವು ತಮ್ಮ ಹಕ್ಕು ಕೇಳುವ ಎಲ್ಲ ಅಧಿಕಾರ ಹೊಂದಿದ್ದು, ಇಂದಿನ ಕಾರ್ಯಾಗಾರದಲ್ಲಿ ಸಂಪೂರ್ಣ ಮಾಹಿತಿ ತಿಳಿದುಕೊಂಡು, ತಮಗಿರುವ ಅನುಕೂಲತೆಗಳ ಲಾಭ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.
ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಗರ ಬೀದಿ ಬದಿ ವ್ಯಾಪಾರಸ್ಥರಿಗೆ ಬೆಂಬಲ ಉಪಘಟಕದಡಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಟ್ಟಣ ವ್ಯಾಪಾರ ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಹೊಸದಾಗಿ ಮೇಲ್ದರ್ಜೆಗೇರಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಈ ಕಾರ್ಯ ಪ್ರಗತಿಯಲ್ಲಿರುತ್ತದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ 7542 ಬೀದಿ ಬದಿ ವ್ಯಾಪಾರಸ್ಥರನ್ನು ಸಮೀಕ್ಷೆಯಲ್ಲಿ ಗುರುತಿಸಿ, 5781 ಬೀದಿ ಬದಿ ವ್ಯಾಪಾರಸ್ಥರಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ಗುರುತಿನ ಚೀಟಿ ನೀಡಲಾಗಿದೆ ಎಂದು ಝಿಯಾವುಲ್ಲಾ ತಿಳಿಸಿದರು.