ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಪ್ರವಾಸಿಗರಿಗೆ ಅನುಕೂಲ: ಎ.ಎನ್. ಮಹೇಶ್
ಚಿಕ್ಕಮಗಳೂರು, ಡಿ.15: ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದರೊಂದಿಗೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಲಾಗುವುದು ಎಂದು ಅರಣ್ಯ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್ ಮಹೇಶ್ ತಿಳಿಸಿದರು.
ಅವರು ಶುಕ್ರವಾರ ಲಕ್ಕವಳ್ಳಿಯ ರಿವರ್ ಟರ್ನ್ ಲಾಡ್ಜ್‍ನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಪ್ರವಾಸೋದ್ಯಮದಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಎಂಬ ಅಪಸ್ವರ ಕೇಳಿ ಬರುತ್ತಿದ್ದು, ಪರಿಸರ ಕಾಳಜಿ ಮತ್ತು ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ನಿಗಮದಿಂದ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಕ್ರಮಕೈಗೊಂಡಿದೆ ಎಂದು ತಿಳಿಸಿದರು.
ವಿಹಾರಧಾಮವನ್ನು ಪರಿಸರ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ ಮತ್ತು ಪರಿಸರಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಹೊರಾಂಗಣ ಚಟುವಟಿಕೆಗಳಾದ ಟ್ರೆಕ್ಕಿಂಗ್, ಕ್ಯಾಂಪಿಂಗ್, ಜಲ ಕ್ರೀಡೆಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಇತಿಮಿತಿಯೊಳಗೆ ಪ್ರವಾಸೋದ್ಯಮಕ್ಕೆ ವಿಶೇಷ ಕಾಳಜಿವಹಿಸಿ ಅಭಿವೃದ್ಧಿಪಡಿಸಿ, ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ ಎಂದು ತಿಳಿಸಿದರು.
ಗಿರಿ ಶ್ರೇಣಿಗಳಲ್ಲಿ ಪ್ರವಾಸಿಗರಿಂದ ಪರಿಸರದ ಮೇಲೆ ದಕ್ಕೆಯಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಗಿರಿ ಶ್ರೇಣಿಯ 14ಸಾವಿರ ಎಕರೆ ಭೂ ಪ್ರದೇಶವನ್ನು ಸೂಕ್ಷ್ಮ ವಲಯದ ಪಟ್ಟಿಗೆ ಸೇರಿಸಿ ಪ್ರವಾಸಿಗರಿಗೆ ತೊಂದರೆಯಾಗದಂತೆ ಭೂಮಿ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಆಧಾರಿಸಿ ಒಂದು ದಿನದಲ್ಲಿ ಎಷ್ಟು ಪ್ರವಾಸಿಗರು ಬಂದು ಹೋಗಬೇಕು ಎಂಬ ನಿರ್ಣಯ ಕೈಗೊಳ್ಳಲು ಅರಣ್ಯ ಇಲಾಖೆ ಹಾಗೂ ವನ್ಯ ಜೀವಿ ಮಂಡಳಿ ಮುಂದೆ ಪ್ರಸ್ತಾವನೆ ಇಡಲಾಗಿದೆ. ಭವಿಷ್ಯದಲ್ಲಿ ನಿರ್ಣಯವನ್ನು ಜಾರಿಗೆ ತರಲಾಗುವುದು ಎಂದರು.
ಮುಳ್ಳಯ್ಯನ ಗಿರಿ ಪ್ರದೇಶದಲ್ಲಿ ವಾಹನಗಳಿಂದ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರದ ಕೈಮರ ಅಥವಾ ಸೀತಾಳಯ್ಯನಗಿರಿಯಿಂದ ಗಿರಿಶ್ರೇಣಿಗೆ 10 ಮಿನಿಬಸ್ ವ್ಯವಸ್ಥೆ ಕಲ್ಪಿಸಲು ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆಯವರೊಂದಿಗೆ ಚರ್ಚಿಸಿ ಅನುಮೋದನೆಗೆ ಕಳಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಐಯ್ಯನ ಕೆರೆ 2ಕೋಟಿ 10ಲಕ್ಷ ರು. ವೆಚ್ಚದಲ್ಲಿ ದೋಣಿವಿಹಾರ, ಕ್ಯಾಂಟೀನ್ ತೆರೆಯುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅರಣ್ಯ ವಸತಿ ವಿಹಾರಧಾಮ ನಿಗಮ ಎಂದ ಕೂಡಲೇ ದುಬಾರಿ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿದೆ. ಜನ ಸಾಮಾನ್ಯರ ಅನುಕೂಲಕ್ಕಾಗಿ ಜಂಗಲ್ ಕ್ಯಾಂಪ್‍ಗಳನ್ನು ಮಾಡಲಾಗುತ್ತಿದೆ. ಕುದುರೆಮುಖ ಭಗವತಿ ಅರಣ್ಯವಲಯ, ಶಿವಮೊಗ್ಗದ ಸಕ್ಕರೆಬೈಲು ಉಡುಪಿಯ ಆನೆ ಝರಿ, ಸೀತಾನದಿ ಸೇರಿದಂತೆ ಅನೇಕ ಕಡೆ ಜಂಗಲ್ ಕ್ಯಾಂಪ್ ನಿರ್ಮಾಣ ಮಾಡಲಾಗುವುದು. ಹಾಗೂ ಮಲೆಯ ಮಾರುತದಲ್ಲಿ ಜಂಗಲ್ ಕ್ಯಾಂಪ್ ಮಾಡುವ ಚಿಂತನೆಯಿದೆ ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ರಾಜ್ಯದಲ್ಲಿ ಒಟ್ಟು 22ಕ್ಯಾಂಪ್‍ಗಳು ಕಬಿನಿ ಕ್ಯಾಂಪ್‍ನಿಂದ ನಿಗಮಕ್ಕೆ ಹೆಚ್ಚಿನ ಆದಾಯ ಹರಿದು ಬುತ್ತಿದೆ ಎಂದ ಅವರು, ಪಿಲಿಕುಳ ನಿಸರ್ಗಧಾಮವನ್ನು ಉತ್ತಮ ಆರೋಗ್ಯದ ಜೊತೆಗೆ ಪ್ರವಾಸೋದ್ಯಮ ಕಲ್ಪನೆಯಲ್ಲಿ ಯೋಜನೆ ತಯಾರಿಸಲಾಗಿದೆ ಎಂದರು.
‘ತಮ್ಮ ಅವಧಿಯಲ್ಲಿ ನಿಗಮ 10.5 ಕೋಟಿ ಲಾಭದಲ್ಲಿದೆ. ಕಳೆದ ಸಾಲಿನಲ್ಲಿ 8.ಕೋಟಿ ಲಾಭದಲ್ಲಿದ್ದ ನಿಗಮ ಈಗ 10.5 ಕೋಟಿ ದಾಟಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಲಾಭದ ನಿರೀಕ್ಷೆ ಇದೆ. ದೇಶದಲ್ಲಿ ವಿಶೇಷ ಜಂಗಲ್ ಲಾಜ್ಡ್ ವಿಶ್ವದರ್ಜೆಯ ಸ್ಥಾನಮಾನ ಹೊಂದಿದೆ. ಮಕ್ಕಳಿಗೆ ಹೆಚ್ಚು ಪರಿಸರ ಕ್ರೀಡೆ ಹಾಗೂ ಜಲಕ್ರೀಡೆಯಲ್ಲಿ ಆಸಕ್ತಿ ಹಾಗೂ ಅವರನ್ನು ತೊಡಗಿಸುವ ಉದ್ದೇಶದಿಂದ ನದಿಪಾತ್ರಗಳಲ್ಲಿ ರಿವರ್ ರ್ಯಾಪ್ಟಿಂಗ್, ಜಲಕ್ರೀಡೆ ಮಕ್ಕಳಿಗಾಗಿ ಪ್ರಾರಂಭಿಸಲಾಗುವುದು. ಹವ್ಯಾಸಿ ಛಾಯಾಗ್ರಾಹಣಕ್ಕೆ ಸರ್ಕಾರ ಧರ ನಿಗದಿ ಮಾಡಿದ್ದು, ಹವ್ಯಾಸಿ ಛಾಯಾಗ್ರಹಣ ಉತ್ತೇಜಿಸುವ ಉದ್ದೇಶದಿಂದ ಉಚಿತ ಛಾಯಾಗ್ರಹಣಕ್ಕೆ ಅವಕಾಶ ಕಲ್ಪಿಸುವಂತೆ ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’
: ಎ.ಎನ್.ಮಹೇಶ್, ಅಧ್ಯಕ್ಷರು, ಅರಣ್ಯ ವಸತಿ ವಿಹಾರಧಾಮ