×
Ad

​ನುಡಿದಂತೆ ನಡೆದ ಕಾಂಗ್ರೆಸ್‌ಗೆ ಮತ್ತೊಂದು ಅವಕಾಶ ನೀಡಿ: ಸಿದ್ದರಾಮಯ್ಯ

Update: 2017-12-15 19:44 IST

ರಾಯಚೂರು, ಡಿ.15: ನಮ್ಮ ಸರಕಾರ ಕಳೆದ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಹೀಗಾಗಿ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಮತ್ತೊಂದು ಅವಕಾಶ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಇಲ್ಲಿನ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ 362 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮಾನ್ವಿ ಕ್ಷೇತ್ರದ ಶಾಸಕ ಜನಪರ ಧೋರಣೆವುಳ್ಳವರಾಗಿದ್ದಾರೆ. ಅವರು ಹೆಚ್ಚು ಮಾತನಾಡುವುದಿಲ್ಲ. ಆದರೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಮೊದಲಿಗರು. ಹೀಗಾಗಿ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕೆಂದು ತಿಳಿಸಿದರು.

ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸೀರೆ, ಸೈಕಲ್ ವಿತರಣೆ ಹಾಗೂ ಭ್ರಷ್ಡಾಚಾರ ನಡೆಸಿರುವುದನ್ನು ಹೊರತುಪಡಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಲ್ಲ. ಹೀಗಾಗಿ ಜನತೆ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸನ್ನು ಅಧಿಕಾರಕ್ಕೆ ತಂದರು. ಜನತೆಯ ಕೊಟ್ಟ ಅಧಿಕಾರವನ್ನು ಜನಪರವಾಗಿ ಬಳಕೆ ಮಾಡಿ ನುಡಿದಂತೆ ನಡೆದಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಉದ್ಯಮಿಪರ: ಪ್ರಧಾನಿ ನರೇಂದ್ರ ಮೋದಿ ವೇದಿಕೆ ಸಿಕ್ಕ ಕೂಡಲೇ 'ಸಬ್ ಕಿ ಸಾಥ್ ಸಬ್ ಕಿ ವಿಕಾಸ್' ಎಂಬ ಘೋಷಣೆಯನ್ನು ಕೂಗುತ್ತಾರೆ. ಆದರೆ, ಕೇಂದ್ರ ಸರಕಾರ ಕಳೆದ ಮೂರುವರೆ ವರ್ಷಗಳಲ್ಲಿ ಕೇವಲ ಅದಾನಿ, ಅಂಬಾನಿ ಸೇರಿದಂತೆ ಉದ್ಯಮಿಗಳ ಅಭಿವೃದ್ಧಿಗೆ ಪೂರಕವಾದಂತಹ ನೀತಿಗಳನ್ನು ಮಾತ್ರ ಜಾರಿಗೊಳಿಸಿದೆ.ಆ ಮೂಲಕ ಬಿಜೆಪಿ ಉದ್ಯಮಿಗಳ ಸರಕಾರವೆ ಹೊರತು ಜನಸಾಮಾನ್ಯರ ಸರಕಾರವಲ್ಲವೆಂದು ಅವರು ಹೇಳಿದರು.

ಹೈ-ಕರ್ನಾಟಕಕ್ಕೆ 371ಜೆ ಅಡಿಯಲ್ಲಿ ವಿಶೇಷ ಸ್ಥಾನಮಾನ ಕಾಂಗ್ರೆಸ್ ನೀಡಿದ್ದೇ ಹೊರತು ಬಿಜೆಪಿಯಲ್ಲ. ಈ ಭಾಗಕ್ಕೆ ಬಿಜೆಪಿ ಅಧಿಕಾರಾವಧಿಯಲ್ಲಿ ಏನೇನು ಮಾಡಿಲ್ಲ ಎಂಬುದು ಜಗಜ್ಜಾಹಿರಾಗಿದ್ದು, ಜನತೆಯ ಬಳಿ ಮತಕೇಳುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ಆದರೂ ಕಾಂಗ್ರೆಸ್ ವಿರುದ್ಧ ಸುಳ್ಳು ಪ್ರಚಾರಗಳನ್ನು ಮಾಡುತ್ತಾ ತಿರುಗಾಡುತ್ತಿದ್ದಾರೆ. ಬಿಜೆಪಿಯ ಈ ಜನವಿರೋಧಿ ನೀತಿಗೆ ಇಲ್ಲಿನ ಜನತೆ ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕೆಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಮಾನ್ವಿ ಕ್ಷೇತ್ರದ ಶಾಸಕ ಹಂಪಯ್ಯ ನಾಯಕ, ವಿಧಾನಸಭಾ ಸದಸ್ಯ ಹಂಪನಗೌಡ ಬಾದರ್ಲಿ, ಪರಿಷತ್ ಸದಸ್ಯ ಭೋಸರಾಜ್, ಲೋಕಸಭಾ ಸದಸ್ಯ ಬಿ.ವಿ.ನಾಯಕ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News