×
Ad

ಬಿಜೆಪಿಯನ್ನು ಅಧಿಕಾರಕ್ಕೆ ತರಲು ಉಡುಪಿಯಲ್ಲಿ ಧರ್ಮ ಸಂಸದ್ : ನಿಡುಮಾಮಿಡಿಶ್ರೀ

Update: 2017-12-15 20:37 IST

ಮೈಸೂರು,ಡಿ.15: ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪೂರಕ ವಾತಾವರಣವನ್ನು ಸೃಷ್ಟಿಸಲು ಉಡುಪಿಯಲ್ಲಿ ಧರ್ಮ ಸಂಸದ್ ನಡೆಸಲಾಯಿತೇ ಹೊರತು ಯಾವ ಸಮಾಜವನ್ನೂ ಉದ್ಧಾರ ಮಾಡಲು ಅಲ್ಲ ಎಂದು ನಿಡುಮಾಮಿಡಿ ಮಹಾಸಂಸ್ಥಾನ ಮಠದ ಶ್ರೀವೀರಭದ್ರ ಚನ್ನಮಲ್ಲ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಭಾರತ ಮೂಲ ನಿವಾಸಿ ಫೌಂಡೇಶನ್, ದಲಿತ ನೌಕರರ ಸಂಘ, ದಲಿತ ವಿದ್ಯಾರ್ಥಿ ಸಮಿತಿಯು ನಗರದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ದಿ.ರಾಜಶೇಖರ ಕೋಟಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಧರ್ಮ ಸಂಸದ್ ಉದ್ದೇಶ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದು, ಗೋಹತ್ಯೆ ನಿಷೇಧಮಾಡಬೇಕು ಎನ್ನುವುದು. ಬಹುಸಂಖ್ಯಾತರ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ. ಮತಗಳಿಸಲು ಬಹುಸಂಖ್ಯಾತರನ್ನು ಓಲೈಸುತ್ತಾರೆ ಎಂದರು.

ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಅವರಿಗೆ ನಿಜವಾದ ಕಾಳಜಿ ಇಲ್ಲ. ಅವರಿಗೆ ಸಮಾನತೆ ಬೇಕಿಲ್ಲ ಎಂದು ಕಿಡಿಕಾರಿದರು.
ಪೇಜಾವರ ಶ್ರೀಗಳು ಅಸ್ಪೃಶ್ಯತೆ ನಿವಾರಣೆ ಬಗ್ಗೆ ಮಾತನಾಡುತ್ತಾರೆ. ಮೊದಲು ತಮ್ಮ ಮಠದಲ್ಲಿ ನಡೆಯುತ್ತಿರುವ ಭೇದ-ಭಾವ ತೊಲಗಿಸಲಿ ನಂತರ ದಲಿತರ ಕಾಳಜಿ ಬಗ್ಗೆ ಮಾತನಾಡಲಿ ಎಂದು ಸಲಹೆ ನೀಡಿದ ನಿಡುಮಾಮಿಡಿ ಶ್ರೀಗಳು, ಮೊದಲು ತಮ್ಮ ಮಠದಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವ ಪರಿಪಾಠ ಬೆಳೆಸಿಕೊಳ್ಳಲಿ. ಬ್ರಾಹ್ಮಣರಿಗೆ ಒಂದು ಕಡೆ, ಅಬ್ರಾಹ್ಮಣರಿಗೆ ಮತ್ತೊಂದು ಕಡೆ ಊಟ ಬಡಿಸಲಾಗುತ್ತದೆ. ಮೊದಲು ಉಡುಪಿ ಮಠದಲ್ಲಿ ಸಮಾನತೆ ಕಂಡುಕೊಂಡು, ನಂತರ ದಲಿತರ ಬಗ್ಗೆ ಮಾತನಾಡಲಿ ಎಂದು ಹೇಳಿದರು.

ಧರ್ಮ ಸಂಸದ್‌ನಲ್ಲಿ ಶಂಕರಾಚಾರ್ಯ, ರಾಮಾನುಜಾಚಾರ್ಯರ ಪರಂಪರೆಯವರು ಭಾಗವಹಿಸಲಿಲ್ಲ. ಮಧ್ವಚಾರ್ಯ ಪರಂಪರೆಯವರಷ್ಟೇ ಪಾಲ್ಗೊಂಡಿದ್ದರು. ಮೊದಲಿನಿಂದಲೂ ಈ ಮಧ್ವಚಾರ್ಯ ಪರಂಪರೆಯವರು ಹಿಂದೂ ಸಮಾಜ ನಿರ್ಮಾಣ ಮಾಡಲು ಯತ್ನಿಸುತ್ತಿರುತ್ತಾರೆ. ಹಿಂದೂ ರಾಜಕಾರಣವನ್ನು ಪೋಷಿಸಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದೇ ಅವರ ಅಜೆಂಡಾ. ಇದೊಂದು ಪೂರ್ವಾಗ್ರಹ ಪೀಡಿತ ಕಾರ್ಯಕ್ರಮ ಎಂದು ವಾಗ್ದಾಳಿ ನಡೆಸಿದರು.

ಇತ್ತೀಚಿನ ಗಲಭೆಗಳನ್ನು ನೋಡುತ್ತಿದ್ದರೆ ಕರ್ನಾಟಕ ಮಾತ್ರವಲ್ಲ ಭಾರತವೇ ಕಾದಕಾವಲಿಯಂತೆ ಆಗುತ್ತಿರುವುದು ದುರದೃಷ್ಟಕರ. ಶಾಂತಿ, ಪ್ರೇಮ, ವಿಶ್ವಾಸ, ಸಾಮರಸ್ಯ, ಸೌಹಾರ್ದದಿಂದ ಬದುಕಬೇಕಿದ್ದ ಭಾರತದಲ್ಲಿ ಅಶಾಂತಿ ತಲೆ ಎತ್ತಿರುವುದು ಅಪಾಯ ಎಂದು ನಿಡುಮಾಮಿಡಿ ಶ್ರೀ ಶ್ರೀವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ, ಧಾರ್ಮಿಕ ದ್ವೇಷ ಅಸಹನೆಗಳ ಪರಿಣಾಮ ಇಂತಹ ಘಟನೆಗಳು ನಡೆಯುತ್ತಿವೆ. ಕೋಮುವಾದದ ಪ್ರತಿಪಾದಕರಾದವರು ಕೋಮುವಾದದ ಟಂಕ ಶಾಲೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಸ್ವಾಮೀಜಿ ಗುಡುಗಿದರು.

ಉಗ್ರವಾದ ಎಂಬುದು ಕಾಶ್ಮೀರಕ್ಕಷ್ಟೇ ಸೀಮಿತವಾಗಿತ್ತು. ಆದರೆ ಹಿಂದೂ ಪ್ರತಿಪಾದಕರು ಯಾವಾಗ ಬಾಬರಿ ಮಸೀದಿಯನ್ನು ಕೆಡವಿಹಾಕಿದರೋ ಆಗಲೇ ಉಗ್ರವಾದ ಎಂಬುದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ವ್ಯಾಪಿಸಿತು. ದ್ವೇಷಾಸೂಯ ಜ್ವಾಲೆಯನ್ನು ಕಟ್ಟುವ ಯತ್ನಕ್ಕೆ ಕೈಹಾಕುತ್ತಿದ್ದಾರೆ. ಇದು ಉತ್ತಮ ನಡೆಯಲ್ಲ. ಪ್ರಜಾಸತ್ತೆಗೆ ಮಾರಕವಾದ, ಸಂವಿಧಾನಕ್ಕೆ ವಿರೊಧವಾದ ನಿಲುವು ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೂ ಧರ್ಮ ಬೇರೆ, ಹಿಂದುತ್ವ ಬೇರೆ, ಹಿಂದೂ ಧರ್ಮದಿಂದ ಸಮಾಜವನ್ನು ಒಂದು ಮಾಡಲು ಸಾಧ್ಯವಿಲ್ಲ, ಹಿಂದೂ ಧರ್ಮದಲ್ಲೇ ಅಸಮಾನತೆ ಇದೆ ಎಂದು ಅಭಿಪ್ರಾಯಿಸಿದ್ದ ನಿಡುಮಾಮಿಡಿ ಶ್ರೀಗಳು, ರಾಜಕೀಯ ಅಧಿಕಾರಕ್ಕಾಗಿ ಬಲವಂತವಾಗಿ ಹಿಂದುತ್ವವನ್ನು ಹೇರಲಾಗುತ್ತಿದೆ, ಅಲ್ಪಸಂಖ್ಯಾತರನ್ನು ಶತ್ರುಗಳ ಸ್ಥಾನದಲ್ಲಿ ನಿಲ್ಲಿಸಿ ಅಧಿಕಾರ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ದೇಶವನ್ನು ಬಲಿತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ.
- ನಿಡುಮಾಮಿಡಿಶ್ರೀ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News