ಬೆಂಕಿ ಹಚ್ಚುವವರಿಗೆ ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ: ಯು.ಟಿ.ಖಾದರ್
ಬೆಳಗಾವಿ, ಡಿ.15: ಬೆಂಕಿ ಹಚ್ಚುವವರಿಗೆ ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ ಸಿಗುತ್ತದೆ. ಕರಾವಳಿ ಪ್ರದೇಶದಲ್ಲಿ ಬಿಜೆಪಿ ಮುಖಂಡರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಕಿ ಹಚ್ಚುವವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇಂದ್ರ ಸರಕಾರದಲ್ಲಿ ಮಂತ್ರಿ ಸ್ಥಾನ ನೀಡಿದ್ದಾರೆ. ಅಲ್ಲದೆ, ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಪ್ರಕರಣಗಳ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಡುವ ಆರೋಪಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದರು.
ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ನಾನು ಪ್ರಚಾರ ಕೈಗೊಂಡ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಖಾದರ್ ಹೇಳಿದರು.
ವಿಡಿಯೋ ವೈರಲ್ ಮಾಡಿದ್ದರಿಂದ ಇಡೀ ದೇಶಕ್ಕೆ ನನ್ನ ಪರಿಚಯವಾದಂತಾಗಿದೆ ಎಂದು ತಮ್ಮನ್ನು ಹೀಯಾಳಿಸಿದ ಬಿಜೆಪಿ ಮುಖಂಡರಿಗೆ ಖಾದರ್ ತಿರುಗೇಟು ನೀಡಿದರು. ಗುಜರಾತ್‌ನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ವೇಳೆ ಖಾದರ್ ಜತೆ ಕೇವಲ ಕೆಲವು ಮಂದಿ ಮಾತ್ರ ಜತೆಯಲ್ಲಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಭರಿತವಾಗಿ ಬಿಂಬಿಸಲಾಗಿತ್ತು.