×
Ad

11 ಲಕ್ಷ ಪಡಿತರ ಚೀಟಿ ವಿತರಣೆ: ಯು.ಟಿ.ಖಾದರ್

Update: 2017-12-15 21:10 IST

ಬೆಳಗಾವಿ, ಡಿ.15: ಆಹಾರ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ಪಡಿತರ ವಿತರಿಸಲಾಗುತ್ತಿದ್ದು, ಸರಳ ಮತ್ತು ಉತ್ತಮ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ತಿಳಿಸಿದರು.

ಶುಕ್ರವಾರ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಹಾರ ಇಲಾಖೆಯಿಂದ ಪಡಿತರ ಚೀಟಿಗಾಗಿ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದರು.

ರಾಜ್ಯದಿಂದ ಒಟ್ಟು 15 ಲಕ್ಷ ಅರ್ಜಿಗಳು ಸ್ವೀಕೃತವಾಗಿದ್ದವು. ಅವುಗಳಲ್ಲಿ ಒಂದು ಲಕ್ಷ ಅರ್ಜಿಗಳು ತಿರಸ್ಕೃತವಾಗಿವೆ. 11 ಲಕ್ಷ ಪಡಿತರ ಚೀಟಿಗಳನ್ನು ಈಗಾಗಲೇ ಫಲಾನುಭವಿಗಳಿಗೆ ವಿತರಿಸಲಾಗಿದ್ದು, ಇನ್ನುಳಿದ ಪಡಿತರ ಚೀಟಿಗಳನ್ನು ಶೀಘ್ರವೇ ವಿತರಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿಯೆ ಬೆಳಗಾವಿ ಜಿಲ್ಲೆಯಿಂದ ಪಡಿತರ ಚೀಟಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದು, ಜಿಲ್ಲೆಯಿಂದ ಒಟ್ಟು 1.93 ಲಕ್ಷ ಅರ್ಜಿಗಳು ಸ್ವೀಕೃತವಾಗಿವೆ. ಅವುಗಳಲ್ಲಿ 1.88 ಲಕ್ಷ ಅರ್ಜಿಗಳನ್ನು ಪರಿಶೀಲಿಸಲಾಗಿದೆ. 78 ಸಾವಿರ ಪಡಿತರ ಚೀಟಿಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗಿದೆ. ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಗತಿ ತಿಳಿಯಲು ಇಲಾಖೆಯ ವೆಬ್‌ಸೈಟ್ ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಅಲೆಮಾರಿಗಳು, ಚಿಂದಿ ಆಯುವವರು, ರಸ್ತೆ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲ ಕಡು, ಬಡವರಿಗೂ ಇಲಾಖೆಯಿಂದ ಪಡಿತರ ವಿತರಿಸಲಾಗುತ್ತಿದೆ. ಇಲಾಖೆಯಿಂದ ದೇಶದಲ್ಲೆ ಮಾದರಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಖಾದರ್ ತಿಳಿಸಿದರು.

ರಾಜ್ಯದ 1100 ನ್ಯಾಯಬೆಲೆ ಅಂಗಡಿಗಳಲ್ಲಿ ಪಿಒಎಸ್ ವ್ಯವಸ್ಥೆ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಇದರಿಂದ ಪಡಿತರ ವಿತರಿಸಿದ ಬಗ್ಗೆ ನಾವು ನಿಖರವಾಗಿ ಮಾಹಿತಿ ಪಡೆಯಲು ಸಾಧ್ಯವಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಪಿಒಎಸ್ ವ್ಯವಸ್ಥೆಯಲ್ಲಿ ಅನಾನುಕೂಲವಾಗುತ್ತಿದೆ ಎಂದು ಅವರು ಹೇಳಿದರು.

ನೆಟ್‌ವರ್ಕ್ ಸಮಸ್ಯೆ ಇರುವ ಪ್ರದೇಶಗಳಲ್ಲಿ ಸರಕಾರದಿಂದಲೆ ಬ್ರಾಡ್‌ಬ್ಯಾಂಡ್ ಸಂಸ್ಥೆಯವರೊಂದಿಗೆ ಚರ್ಚಿಸಿ ನೆಟ್‌ವರ್ಕ್ ಒದಗಿಸುವ ಕುರಿತು ಚಿಂತಿಸಲಾಗುತ್ತಿದೆ. ಶೀಘ್ರವೇ ಈ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಖಾದರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಸ್.ಝಿಯಾವುಲ್ಲಾ ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News