×
Ad

ಅಕಾಡೆಮಿಯಲ್ಲಿ ಐರಿ ಜನಾಂಗದ ಕಡೆಗಣನೆ : ಕೊಡವ ಐರಿ ಸಮಾಜ ಆರೋಪ

Update: 2017-12-16 18:10 IST

ಮಡಿಕೇರಿ,ಡಿ.16 : ಕೊಡವ ಸಂಸ್ಕೃತಿ, ಆಚಾರ ವಿಚಾರ, ಭಾಷೆ ಕೊಡವ ಜನಾಂಗವೊಂದಕ್ಕೇ ಸೀಮಿತವಾಗಿಲ್ಲವೆಂದು ಅಭಿಪ್ರಾಯಪಟ್ಟಿರುವ ಕೊಡವ ಐರಿ ಸಮಾಜ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಐರಿ ಜನಾಂಗ ಹಾಗೂ ಕೊಡವ ಭಾಷೆಯನ್ನಾಡುವ ಇತರೆ ಮೂಲ ಜನಾಂಗಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷರಾದ ಮೇಲತಂಡ ರಮೇಶ್, ಕಳೆದ ಕೆಲವು ವರ್ಷಗಳಿಂದ ಕೊಡವ ಸಾಹಿತ್ಯ ಅಕಾಡೆಮಿ ಐರಿ ಸಮಾಜವನ್ನು ಕಡೆಗಣಿಸುತ್ತಾ ಬರುತ್ತಿದ್ದು, ಇದನ್ನು ಖಂಡಿಸುವುದಾಗಿ ತಿಳಿಸಿದರು. ಕೊಡವ ಸಂಪ್ರದಾಯವನ್ನು ಎತ್ತಿ ಹಿಡಿಯುವಲ್ಲಿ ಐರಿ ಸಮಾಜ ಪ್ರಮುಖ ಪಾತ್ರ ವಹಿಸಿದ್ದು, ಪೀಚೆಕತ್ತಿ, ಜೋಮಾಲೆ, ಪತ್ತಾಕ್ ಮೊದಲಾದ ಕೊಡವ ಸಾಂಪ್ರದಾಯಿಕ ಆಭರಣಗಳನ್ನು ಐರಿ ಸಮಾಜದ ಬಂಧುಗಳೆ ತಯಾರಿಸುತ್ತಾರೆ. ಆದರೆ, ಈ ಜನಾಂಗಕ್ಕೆ ಅಕಾಡೆಮಿಯಲ್ಲಿ ಯಾವುದೇ ಸ್ಥಾನಮಾನ ನೀಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಉಪಾಧ್ಯಕ್ಷರಾದ ಬಬ್ಬೀರ ಸರಸ್ವತಿ ಮಾತನಾಡಿ, ಕೊಡವ ಜನಾಂಗದ ಶೇ.5 ರಷ್ಟು ಮಂದಿಯಿಂದ 18 ಮೂಲ ನಿವಾಸಿ ಕೊಡವ ಜನಾಂಗದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿದರು. ರಾಜಕೀಯ ಪಕ್ಷಗಳು ಕುತಂತ್ರಿಗಳನ್ನು ಬೆಳೆಸುತ್ತಿವೆಯೆಂದು ಆರೋಪಿಸಿದ ಅವರು, ಮೂಲ ನಿವಾಸಿ ಜನಾಂಗಗಳು ಮೂಲೆ ಗುಂಪಾಗುತ್ತಿದ್ದು, ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಅನಿವಾರ್ಯವಾಗಿ ಪ್ರಶ್ನಿಸಲೇ ಬೇಕಾಗುತ್ತದೆ ಎಂದು ತಿಳಿಸಿದರು.

ಸಮಾಜವನ್ನು ಒಡೆಯಲು ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆಯೆ ಹೊರತು ಒಗ್ಗೂಡಿಸುವ ಕಾರ್ಯ ನಡೆಯುತ್ತಿಲ್ಲವೆಂದು ಆರೋಪಿಸಿದ ಬಬ್ಬೀರ ಸರಸ್ವತಿ, ‘ಊರ್ ಮಂದ್’ಗಳನ್ನು ಕೊಡವ ಮಂದ್‍ಗಳನ್ನಾಗಿ ಪರಿವರ್ತಿಸಿ ಒಂದು ಜನಾಂಗದ ಚಟುವಟಿಕೆಗಳಿಗೆ ಮಾತ್ರ ಬಳಸುವ ಮೂಲಕ ಹಲವೆಡೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಕೊಡವ ಸಂಸ್ಕೃತಿ ಒಂದೇ ಜನಾಂಗಕ್ಕೆ ಸೀಮಿತವೆ ಎಂದು ಪ್ರಶ್ನಿಸಿದ ಬಬ್ಬೀರ ಸರಸ್ವತಿ, ಊರ್ ಮಂದ್‍ಗಳು ಕೊಡವ ಮಂದ್‍ಗಳಾಗಿಯೇ ಮುಂದುವರಿದರೆ ನಾವುಗಳು ಪ್ರತ್ಯೇಕ ಮಂದ್‍ಗಳನ್ನು ರಚಿಸಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಕೇವಲ ಕೊಡವರಿಗೆ ಮಾತ್ರ ಸೀಮಿತವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಕೊಡವ ಭಾಷಿಕರ ಹೋರಾಟದ ಫಲವಾಗಿ ಕೊಡವ ಭಾಷಿಕ ಇತರೆ ಜನಾಂಗಗಳವರಿಗೆ ಅಕಾಡೆಮಿಯಲ್ಲಿ ಮಾನ್ಯತೆ ನೀಡಲಾಗಿತ್ತು. ಆದರೆ, ಕಳೆದ ಅಕಾಡೆಮಿಯ ಆಡಳಿತ ಮಂಡಳಿಯ ಅವಧಿಯಲ್ಲಿ ಅಧ್ಯಕ್ಷರ ಕುತಂತ್ರದಿಂದಾಗಿ ಕೊಡವ ಭಾಷಿಕ ಇತರ ಜನಾಂಗದವರಿಗೆ ಪ್ರಾತಿನಿಧ್ಯ ನೀಡದೆ ಕೊಡವ ಜನಾಂಗದವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. 101 ಕಾರ್ಯಕ್ರಮಗಳನ್ನು ನಡೆಸಿದ್ದರು ಒಂದೇ ಒಂದು ಆಹ್ವಾನ ಪತ್ರಿಕೆ ಐರಿ ಸಮಾಜಕ್ಕೆ ತಲುಪಿಲ್ಲವೆಂದು ಟೀಕಿಸಿದರು.

ವಿಶ್ವ ಪ್ರಸಿದ್ಧಿಯನ್ನು ಪಡೆದ ಕೊಡಗಿನ ವಾಲಗ ಕೆಂಬಟ್ಟಿ ಜನಾಂಗದ ಕೊಡುಗೆಯಾಗಿದ್ದು, ಕೊಡವ ಸಂಸ್ಕೃತಿಯ ಉಳಿವಿಗೆ ಕೊಡವ ಭಾಷಿಕ 18 ಮೂಲ ನಿವಾಸಿಗಳು ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ಆದರೆ, ಕೊಡವ ಜನಾಂಗ ಪ್ರತಿಯೊಂದು ವಿಚಾರದಲ್ಲು “ನಂಗಡ ನಂಗಡ” ಎಂದು ಹೇಳಿಕೊಳ್ಳುತ್ತ ಇತರರನ್ನು ಮೂಲೆಗುಂಪು ಮಾಡುತ್ತಿದೆ ಎಂದು ಬಬ್ಬೀರ ಸರಸ್ವತಿ ಆರೋಪಿಸಿದರು.

ಕೊಡವ ಸಂಸ್ಕೃತಿಗೆ ಜಿಲ್ಲೆಯ ಮೂಲ ನಿವಾಸಿ ಕೊಡವ ಭಾಷಿಕರು ನೀಡಿರುವ ಕೊಡುಗೆಗಳ ಬಗ್ಗೆ ಬಹಿರಂಗ ಚರ್ಚೆಗೆ ವೇದಿಕೆ ಕಲ್ಪಿಸಲಿ ಎಂದು ಅವರು ಸವಾಲು ಎಸೆದರು. ಐರಿ ಜನಾಂಗಕ್ಕೆ ಕೊಡವ ಸಾಹಿತ್ಯ ಅಕಾಡೆಮಿಯಿಂದ ಆಗಿರುವ ಅನ್ಯಾಯದ ಬಗ್ಗೆ ಅಕಾಡೆಮಿಯ ನೂತನ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಗುವುದೆಂದು ಬಬ್ಬೀರ ಸರಸ್ವತಿ ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಐರೀರ ಬೋಪಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News