ದಾವಣಗೆರೆ; ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿಗೆ 4 ವರ್ಷ ಜೈಲು ಶಿಕ್ಷೆ

Update: 2017-12-16 13:31 GMT

ದಾವಣಗೆರೆ,ಡಿ.16:ನೆರೆ ಮನೆಯ 9 ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 68 ವರ್ಷದ ವೃದ್ಧ ಆರೋಪಿಗೆ ಪೋಕ್ಸೋ ಕಾಯ್ದೆಯಡಿ 4 ವರ್ಷ ಕಠಿಣ ಶಿಕ್ಷೆ, 15ಸಾವಿರ ರೂ. ದಂಡ ವಿಧಿಸಿ 2ನೇ ಹೆಚ್ಚುವರಿ ಸೆಷನ್ಸ್ ಹಾಗೂ ವಿಶೇಷ ನ್ಯಾಯಾಲಯ(ಪೋಕ್ಸೋ) ತೀರ್ಪು ನೀಡಿದೆ. 

ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದ ಡಿ.ತಿಪ್ಪೇಸ್ವಾಮಿ ಅಲಿಯಾಸ್ ತಿಪ್ಪಜ್ಜ(68 ವರ್ಷ) ಶಿಕ್ಷೆಗೆ ಗುರಿಯಾದ ಆರೋಪಿ. 7.9.2016ರ ಸಂಜೆ 7 ಗಂಟೆ ಹೊತ್ತಿನಲ್ಲಿ ನೆರೆ ಮನೆಯ 4ನೇ ತರಗತಿ ವಿದ್ಯಾರ್ಥಿನಿ 9 ವರ್ಷದ ಅಪ್ರಾಪ್ತೆ ಸೊಪ್ಪು ಪಡೆಯಲು ಬಂದಿದ್ದಾಗ ಆರೋಪಿ ತಿಪ್ಪೇಸ್ವಾಮಿ ಮನೆಯಲ್ಲಿ ಒಬ್ಬನೇ ಇದ್ದ. ಅಪ್ರಾಪ್ತೆಯನ್ನು ಕೊಠಡಿಗೆ ಕರೆದೊಯ್ದು, ಮಗುವಿನ ಮೈ-ಕೈ ಮುಟ್ಟಿ, ಕಿರುಕುಳ ನೀಡಿದ್ದನು. ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಆರೋಪಿ ತಿಪ್ಪಜ್ಜನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಕಲಂ 8 ಮತ್ತು 12(ಪೋಕ್ಸೋ) 2012ರಡಿ ಆರೋಪಣಾ ಪಟ್ಟಿ ಸಲ್ಲಿಸಿದ್ದು, ದೀರ್ಘ ವಿಚಾರಣೆ ನಡೆಸಿದ ನಂತರ ಆರೋಪಿ ತಿಪ್ಪೇಸ್ವಾಮಿ ಅಲಿಯಾಸ್ ತಿಪ್ಪಜ್ಜನ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ಪೋಕ್ಸೋ ಕಾಯ್ದೆಯಡಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ(ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ನಾಗಶ್ರೀ ಆರೋಪಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ, 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. 

ದಂಡದ ಹಣದಲ್ಲಿ ನೊಂದ ಬಾಲಕಿಗೆ ಪರಿಹಾರ ನೀಡುವಂತೆ ತೀರ್ಪು ನೀಡಿದರು. ಸರ್ಕಾರದ ಪರವಾಗಿ ವಿಶೇಷ 2ನೇ ಹೆಚುವರಿ ಮತ್ತು ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಎಚ್.ಎಸ್. ಶೌಕತ್ ಅಲಿ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News