ಕಲ್ಲು ಕ್ವಾರಿಯಲ್ಲಿ 25 ವರ್ಷಗಳಿಂದ ದುಡಿಯುತ್ತಿದ್ದ 11 ಜೀತದಾಳುಗಳ ರಕ್ಷಣೆ

Update: 2017-12-16 17:34 GMT

ಬೆಂಗಳೂರು, ಡಿ.16: ಬೆಂಗಳೂರು ನಗರ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿದ ದಕ್ಷಿಣ ವಿಭಾಗದ ಪೋಲಿಸರು ನಗರದ ಹೊರವಲಯದ ಆನೇಕಲ್ ಮಾತಲಿಂಗಾಪುರ ಸಮೀಪದ ಕಲ್ಲು ಕ್ವಾರಿಯಲ್ಲಿ ಕಳೆದ 25 ವರ್ಷಗಳಿಂದ ಜೀತದಾಳುಗಳಾಗಿ ದುಡಿಯುತ್ತಿದ್ದ 11 ಜೀತದಾಳುಗಳನ್ನು ರಕ್ಷಿಸಿದ್ದಾರೆ.

ಶನಿವಾರ ನಗರದ ಐಜೆಎಮ್ ಎನ್‌ಜಿಓ ಸಂಸ್ಥೆ ನೆರವಿನಿಂದ ಜಿಗಣಿ ಪೊಲೀಸರು ಹಾಗೂ ಆನೇಕಲ್ ತಹಶೀಲ್ದಾರ್ ದಿನೇಶ್ ಕಾರ್ಯಾಚರಣೆ ನಡೆಸಿ, ನಾಲ್ವರು ಅಪ್ರಾಪ್ತ ವಯಸ್ಸಿನ ಮಕ್ಕಳು ಸೇರಿ 11 ಜನರನ್ನು ಜೀತ ಪದ್ಧತಿಯಿಂದ ರಕ್ಷಣೆ ಮಾಡಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಗ್ರಾಮವೊಂದರಿಂದ ವಲಸೆ ಬಂದು ಹತ್ತು ವರ್ಷಗಳಿಂದ ಕಲ್ಲಿನ ಕ್ವಾರಿಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ರಾಜಪ್ಪಮತ್ತು ಮುನಿಲಕ್ಷ್ಮಮ್ಮ ಸೇರಿ ಮೂರು ಕುಟುಂಬದ 11 ಸದಸ್ಯರನ್ನು ರಕ್ಷಿಸಿ ಸಮಾಜದ ಮುಖ್ಯವಾಹಿನಿಗೆ ತರಲಾಗಿದೆ.

ಮಾತಲಿಂಗಾಪುರ ಸಮೀಪದ ದಿಲೀಪ್ ಎಂಬುವವನಿಗೆ ಸೇರಿದ ಕಲ್ಲು ಕ್ವಾರೆಯಲ್ಲಿ ಕೆಲಸ ಮಾಡಲು ರಾಜಪ್ಪಕುಟುಂಬವನ್ನು ಕರೆತರಲಾಗಿತ್ತು. ಆದರೆ, ಕ್ವಾರಿಯ ಮಾಲಕ ದಿಲೀಪ್ ಎಂಬಾತ ಅಕ್ರಮವಾಗಿ ಬಂಧನದಲ್ಲಿರಿಸಿ ಜೀತಕ್ಕೆ ಇಟ್ಟುಕೊಂಡಿದ್ದರೆಂದು ಆರೋಪಿಸಲಾಗಿದೆ.

ದಿಲೀಪ್, ಕರೆತಂದಾಗಿನಿಂದ ರಜೆ ನೀಡದೆ ಹೊರಗೆ ಬಿಡದೆ ಅಕ್ರಮವಾಗಿ ದುಡಿಸಿಕೊಂಡು, ಸರಿಯಾಗಿ ಸಂಬಳ ನೀಡಿಲ್ಲ ಎನ್ನಲಾಗಿದೆ. ಈ ಸಂಬಂಧ ಆರೋಪಿ ದಿಲೀಪ್ ರನ್ನು ವಶಕ್ಕೆ ಪಡೆದಿರುವ ಜಿಗಣಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News