ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯನವರದ್ದು ನಂ.1 ಸರಕಾರ : ಯಡಿಯೂರಪ್ಪ
ಗಂಗಾವತಿ,ಡಿ.16: ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯನವರದ್ದು ನಂ.1 ಸರ್ಕಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿದರು. ಪರಿವರ್ತನಾ ಯಾತ್ರೆಯ ನಿಮಿತ್ತ ಸ್ಥಳೀಯ ಜ್ಯೂನಿಯರ್ ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, "ಗುಜರಾತ್, ಹಿಮಾಚಲ ಪ್ರದೇಶದ ಫಲಿತಾಂಶ ಬಳಿಕ ಸಿದ್ದರಾಮಯ್ಯ ಮನೆಗೆ ಹೋಗುವುದು ಖಚಿತ, ಆಗಲೇ ರಾಜ್ಯದಲ್ಲಿ ಅಚ್ಚೇ ದಿನ್ ಆರಂಭವಾಗುವುದು" ಎಂದರಲ್ಲದೇ ಸಿದ್ದರಾಮಯ್ಯ ಸರ್ಕಾರ ಜನರ ಮೇಲೆ ಸಾಲದ ಹೊರೆಯ ಭಾರ ಹಾಕಿದೆ. ಅಧಿಕಾರ, ಅನುದಾನಗಳನ್ನು ದುರುಪಯೋಗ ಮಾಡಿಕೊಳ್ಳುವ, ಭ್ರಷ್ಟ ಶಾಸಕ, ಸಚಿವರನ್ನು ರಕ್ಷಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮೇನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಫಲಿತಾಂಶದೊಂದಿಗೆ ರಾಜ್ಯ ಹಾಗೂ ಗುಜರಾತ್ ಚುನಾವಣೆ ಬಳಿಕ ರಾಷ್ಟ್ರವು ಕಾಂಗ್ರೆಸ್ ಮುಕ್ತವಾಗಲಿದೆ. ಪ್ರಧಾನಿ ಮೋದಿ ವಿರುದ್ಧ ಟೀಕಿಸುವ ಸಿದ್ದರಾಮಯ್ಯ ಎಸಿಬಿ, ಸಿಒಡಿ ಮೂಲಕ ಕ್ಲೀನ್ ಚಿಟ್ ಪಡೆದಿದ್ದಾರಾದರೂ ತಾವು ಅಧಿಕಾರಕ್ಕೆ ಬಂದ ಬಳಿಕ ಮರು ತನಿಖೆಗೆ ಆದೇಶಿಸುವೆ ಎಂದರು.
ಜನತೆಗೆ ಮತ್ತು ಮಕ್ಕಳಿಗೆ ಹರಿದ ಸೀರೆ, ಮುರಿದ ಸೈಕಲ್ ನೀಡಿದ್ದೇನೆ ಎಂದು ಎಲುಬಿಲ್ಲದ ನಾಲಿಗೆಯಿಂದ ಹೇಳುತ್ತಿರುವ ಸಿದ್ದರಾಮಯ್ಯ ಹೋದಲ್ಲೆಲ್ಲಾ ಜೈಲಿಗೆ ಹೋದ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಅದರಲ್ಲಿ ಆರೋಪವಿಲ್ಲವೆಂದು ಕೋರ್ಟಿನಲ್ಲಿ ಸಾಬೀತಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕೆಂದು ವಾಗ್ದಾಳಿ ನಡೆಸಿದರು.
"ರಾಜ್ಯದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಈಗಾಗಲೇ ಸಮೀಕ್ಷೆ ಮಾಡಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದು ನಿಶ್ಚಿತ. ಇನ್ನೂ ಎರಡು ಸಲ ಸಮೀಕ್ಷೆ ನಡೆಸಿ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 6 ಮಂದಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದು, ಟಿಕೆಟ್ ಯಾರಿಗೆ ಸಿಕ್ಕರೂ ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸಬೇಕೆಂದರು.
ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಂಸದರಾದ ಕರಡಿ ಸಂಗಣ್ಣ, ಶ್ರೀರಾಮುಲು, ಶಾಸಕ ಸಿ.ಟಿ.ರವಿ, ರಾಜ್ಯ ಮುಖಂಡ ಹೆಚ್.ಆರ್. ಚನ್ನಕೇಶವ, ಮಾಜಿ ಎಂ.ಎಲ್.ಸಿ. ಹಾಲಪ್ಪ ಆಚಾ ರ್ಯ, ಮಾಜಿ ಸಂಸದ ಶಿವ ರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕುಷ್ಟಗಿ ಶಾಸಕ ದೊಡ್ಡನಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ತಿಪ್ಪೇರುದ್ರ ಸ್ವಾಮಿ, ಹೆಚ್. ಗಿರೇಗೌಡ, ಸೈಯ್ಯದ್ ಅಲಿ, ಹೆಚ್.ಎಂ. ಸಿದ್ರಾಮಸ್ವಾಮಿ, ಕಳಕನಗೌಡ, ಶ್ರವಣಕುಮಾರ ರಾಯ್ಕರ್ ಸೇರಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.