×
Ad

​ಎಐಸಿಸಿ ನೂತನ ಅಧ್ಯಕ್ಷ ರಾಹುಲ್‌ಗಾಂಧಿಗೆ ಎಸ್‌ಡಿಪಿಐ ಅಭಿನಂದನೆ

Update: 2017-12-16 22:35 IST

ಬೆಂಗಳೂರು, ಡಿ.16: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್‌ಗಾಂಧಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎ.ಸಯೀದ್ ಅಭಿನಂದನೆ ಸಲ್ಲಿಸಿದ್ದಾರೆ.

ಈಗಿನ ಸರ್ವಾಧಿಕಾರಿ ಪ್ರವೃತ್ತಿಯ ಸ್ಥಿತಿಯಲ್ಲಿ ದೇಶದ ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಜಾತ್ಯತೀತ ವೌಲ್ಯವನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಪಕ್ಷ ಇನ್ನೂ ಹೆಚ್ಚು ಸಕ್ರಿಯವಾಗಿ ಹೋರಾಡಬೇಕಾಗಿದೆ. ಈ ಸಂಬಂಧ ವಿರೋಧ ಪಕ್ಷದ ಹೊಣೆಗಾರಿಕೆ ದೊಡ್ಡದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಕಡಿಮೆ ಮತ ಚಲಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆತ್ಮಾವಲೋಕನ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಹಳೆಯ ರಾಜಕೀಯ ಪಕ್ಷವಾಗಿದೆ. ಪಕ್ಷಕ್ಕೆ ಶಕ್ತ ಮತ್ತು ದಿಟ್ಟ ನಾಯಕತ್ವದ ಅಗತ್ಯತೆಯ ಸಮಯದಲ್ಲಿ ರಾಹುಲ್‌ಗಾಂಧಿಯನ್ನು ಆಯ್ಕೆ ಮಾಡಲಾಗಿದೆ. ಈಗಿನ ಜಾತ್ಯತೀತ ವಿರೋಧಿ ಮತ್ತು ಅಭಿವೃದ್ಧಿ ವಿರೋಧಿ ಶಕ್ತಿಗಳ ವಿರುದ್ಧ ಗಟ್ಟಿಯಾಗಿ ಹೋರಾಡಬೇಕಾಗಿದೆ. ದೇಶದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಐಕ್ಯತೆಯನ್ನು ಬಲಪಡಿಸುವ ಜವಾಬ್ದಾರಿ ಈಗ ರಾಹುಲ್ ಗಾಂಧಿಯ ಮೇಲಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಹೊಸ ನಾಯಕತ್ವ ಕೋಮುವಾದಿ ಶಕ್ತಿಗಳನ್ನು ಸೋಲಿಸಲು ವಿಶಾಲ ಜಾತ್ಯತೀತ ಶಕ್ತಿಗಳ ಒಕ್ಕೂಟ ರಚಿಸುವ ಬಗ್ಗೆ ಹೆಜ್ಜೆ ಇಡಬೇಕಾಗಿದೆ ಎಂದು ಸಯೀದ್ ಪ್ರಕಟನೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News