×
Ad

ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸಲು ರಾಜ್ಯದ ದಲಿತರು ಒಗ್ಗೂಡಬೇಕು : ಚಂದ್ರಕಾಂತ್ ಕರೆ

Update: 2017-12-16 23:30 IST

ಕಡೂರು, ಡಿ.16: ಕಡೂರು ದಲಿತರ ಮತಗಳನ್ನು ಪಡೆದು ದಲಿತರನ್ನೇ ತುಳಿಯುತ್ತಾ ಬರುತ್ತಿರುವ ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸಲು ರಾಜ್ಯದ ಎಲ್ಲ ದಲಿತರು ಒಗ್ಗೂಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಚಂದ್ರಕಾಂತ್ ಎಸ್. ಕಾದ್ರೋಳಿ ಕರೆ ನೀಡಿದ್ದಾರೆ.

ಅವರು ಕಡೂರು ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್‌ರವರ 61ನೇ ಪರಿನಿರ್ವಾಣ ದಿನದ ಅಂಗವಾಗಿ ನಡೆದ ಬೃಹತ್ ಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿರು ಸುಮಾರು 1.50 ಕೋಟಿ ದಲಿತರು ಶೋಷಿತರಾಗಿಯೇ ಉಳಿದಿದ್ದು, ಮೇಲ್ವರ್ಗದವರು ಶೋಷಿತ ಸಮುದಾಯಗಳನ್ನು ಶೋಷಿಸುತ್ತಲೇ ಬರುತ್ತಿದ್ದಾರೆ. ದಲಿತರ ಉದ್ದಾರಕ್ಕಾಗಿ ನಾವಿದ್ದೇವೆ ಎಂದು ಬೊಗಳೆ ಬಿಡುವ ಬಿಜೆಪಿ, ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷಗಳು ದಲಿತರನ್ನು ಮತ ಬ್ಯಾಂಕಿಗಾಗಿ ಮೀಸಲಿಟ್ಟುಕೊಂಡವೇ ಹೊರತು ದಲಿತರ ಉದಾರಕ್ಕಾಗಿ ಏನನ್ನೂ ಮಾಡಲಿಲ್ಲ ಎಂದು ಆರೋಪಿಸಿದರು.

ದಲಿತರ ಮನೆಯಲ್ಲಿ ಊಟ ಮಾಡಿ ಪ್ರಚಾರ ಗಿಟ್ಟಿಸಿದ ಯಡಿಯೂರಪ್ಪ ಅವರ ಸರಕಾರವಿದ್ದಾಗಲೇ ದಲಿತೋದ್ದಾರಕ್ಕಾಗಿ ಯಾವ ಕಾರ್ಯಕ್ರಮವೂ ರೂಪಿಸಲಿಲ್ಲ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮಕ್ಕೆ 25 ಸಾವಿರ ದಲಿತರನ್ನು ಕರೆದೊಯ್ದರೂ ಕೂಡ ದಲಿತರು ಹಾಗೂ ದಲಿತ ಮುಖಂಡರನ್ನು ಮಾತನಾಡಿಸುವ ಸೌಜನ್ಯವನ್ನೂ ತೋರದ ಯಡಿಯೂರಪ್ಪರಿಂದ ಯಾವ ದಲಿತೋದ್ಧಾರ ಸಾಧ್ಯ ಎಂದು ಪ್ರಶ್ನಿಸಿದರು.

ಮಹಾನ್ ನಾಯಕ ಡಾ ಬಿ.ಆರ್. ಅಂಬೇಡ್ಕರ್ ನಮಗೆ ನೀಡಿರುವ ಶಕ್ತಿಯಿಂದ ಇಂತಹ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ. ಈ ನಿಟ್ಟಲ್ಲಿ ದಲಿತರ ಮುಂದಿನ ಪೀಳಿಗೆ ಎಲ್ಲ ರೀತಿಯ ಅವಕಾಶ ಪಡೆಯಲು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಆಗ ಮಾತ್ರ ದಲಿತರ ಉದ್ದಾರ ಸಾಧ್ಯ ಎಂದರು.
ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಸಂತ ಕುಮಾರಿ ಮಾತನಾಡಿ, ಶೊಷಿತ ಸಮುದಾಯಗಳಲ್ಲಿರುವ ಮಹಿಳೆಯರು ಸಂಘಟನೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಹೆಣ್ಣು ಸಾಧಿಸುವ ಛಲ ಹೊಂದಿದಲ್ಲಿ ಏನಾದರೂ ಸಾಧಿಸಬಹುದು. ಎಂಬುದಕ್ಕೆ ಇತಿಹಾಸಗಳಲ್ಲಿನ ನಿದರ್ಶನಗಳೇ ಸಾಕ್ಷಿಯಾಗಿದೆ. ಈ ನಿಟ್ಟಲ್ಲಿ ರಾಜ್ಯಾದ್ಯಂತ ಮಹಿಳೆಯರನ್ನು ಹೋರಾಟದ ಸಂಘಟನೆಗೆ ತರಲಾಗುತ್ತಿದೆ ಎಂದರು.

ಸಮಾವೇಶವನ್ನು ರಾಜ್ಯ ಕಾರ್ಯದರ್ಶಿ ಎಸ್.ಆನಂದ್ ಉಧ್ಘಾಟಿಸಿ, ಅಂಬೇಡ್ಕರ್ ಹೇಳಿರುವಂತೆ ಶೋಷಿತರು ನೀರಿನಲ್ಲಿ ಕೊಚ್ಚಿ ಹೋಗುವ ಮಣ್ಣಿನಂತಾಗಬಾರದು ಕಿಚ್ಚನ್ನು ಹೋರಾಟವಾಗಿ ರೂಪಿಸಬೇಕು ಎಂದಿದ್ದಾರೆ. ದಲಿತೋದ್ಧಾರಕ್ಕೆ ಕೇವಲ ಬಾಯಿ ಮಾತಿನಲ್ಲಿ ಹೇಳದರೆ, ಸಾಲದು ಕಾರ್ಯರೂಪಕ್ಕೆ ಬರಲು ಸಂಘಟಿತರಾಗಬೇಕು ಎಂದರು.
ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷ ಜಿತೇಂದ್ರ ಬಾಬು, ಜಿಲ್ಲಾ ಮಹಿಳಾಧ್ಯಕ್ಷೆ ನಾಝಿಯಾ ಬೇಗಂ, ಬಿ.ಎನ್. ನಾಗಮ್ಮ, ಅಂಜಿ ಸಿದ್ದಾರ್ಥನಗರ, ಮಾರ್ತಾಂಡಪ್ಪ ಹಾದಿಮನಿ, ಬಿ.ಆರ್. ನಾರಾಯಣ. ತಿರುಕಪ್ಪ, ಬಸವರಾಜ ಮಾರಡಗಿ, ನಿರ್ಮಲ, ಜಯಮ್ಮ, ರುಕ್ಮಿಣಿ, ಸುಮನ್ ಗಿರೀಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News