×
Ad

ಕಾನೂನಿನಲ್ಲಿ ಸಾಹಿತ್ಯದ ಕೊರತೆಯಿದೆ: ಸಿ.ಎಚ್.ಹನುಮಂತರಾಯ

Update: 2017-12-17 20:17 IST

ಬೆಂಗಳೂರು, ಡಿ.17: ಕಾನೂನಿನಲ್ಲಿ ಸಾಹಿತ್ಯ ಸಿಂಚನದ ಕೊರತೆಯಿದ್ದು ಸಾರ್ವಜನಿಕ ಅಭಿಪ್ರಾಯಗಳನ್ನು ಆಧರಿಸಿ ರೂಪಿಸಲಾದ ಕಾನೂನುಗಳು ಭಾರತದಲ್ಲಿ ಕಡಿಮೆ ಎಂದು ವಕೀಲ ಸಿ.ಎಚ್.ಹನುಮಂತರಾಯ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದಲ್ಲಿ ಬೆಂಗಳೂರು ವಕೀಲರ ಸಾಹಿತ್ಯ ಕೂಟದ ವತಿಯಿಂದ ಆಯೋಜಿಸಿದ್ದ ಕಾನೂನು ಮತ್ತು ಸಾಹಿತ್ಯ ಕುರಿತಾದ ಉಪನ್ಯಾಸದಲ್ಲಿ, ಭಾರತದಲ್ಲಿ ಕಾನೂನುಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗುತ್ತವೆಯೇ ಹೊರತು ಸಾರ್ವಜನಿಕ ಅಭಿಪ್ರಾಯಗಳಿಂದ ಕಾನೂನು ರೂಪುಗೊಂಡ ಉದಾಹರಣೆಗಳು ವಿರಳ ಎಂದರು.

ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ರೂಪಿಸುವಾಗ ಶಾಸಕ ಮುಕ್ಕಣ್ಣಪ್ಪ ಸಾಹಿತಿ ಕೆ.ಶಿವರಾಮ ಕಾರಂತರ ಚೋಮನದುಡಿ ಕಾದಂಬರಿಯನ್ನು ಆಧಾರವಾಗಿ ಇಟ್ಟುಕೊಂಡು ವಿಧಾನಸಭೆಯಲ್ಲಿ ಮೂರು ದಿವಸ ಮಾತನಾಡಿದ್ದರು. ಅಂತೆಯೇ ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ಪ್ರತಿಬಂಧಕ ತಡೆ ಕಾಯ್ದೆ ರೂಪಿಸುವಾಗ ದೇವನೂರು ಮಹದೇವ ಅವರ ಒಡಲಾಳ ಕೃತಿಯನ್ನೂ ಸದನದಲ್ಲಿ ಚರ್ಚಿಸಲಾಗಿತ್ತು ಎಂದರು.

ಸಾಹಿತ್ಯ ಎಂದರೆ ಸಂವೇದನೆಗಳ ಕಣಜ. ಅವುಗಳಲ್ಲಿ ಕರ್ತೃ ತನ್ನ ಅನುಭವಕ್ಕೆ ಬಂದ ವೇದನೆ, ಹಿಂಸೆ, ಕ್ಲೀಷೆಗಳನ್ನು ಹಿಡಿದಿಡುತ್ತಾನೆ. ವಕೀಲರು ವಾರದಲ್ಲಿ ಒಂದು ದಿನವಾದರೂ ಕಾನೂನು ಪುಸ್ತಕಗಳನ್ನು ಬಿಟ್ಟು ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ವಾದ ಮಂಡನೆ ಮತ್ತು ಪ್ರಕರಣಗಳ ಕರಡು ತಯಾರಿಕೆಯಲ್ಲಿ ಸಾಹಿತ್ಯ ಬಳಕೆಗೆ ಆದ್ಯತೆ ನೀಡಬೇಕು ಎಂದರು.

ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮಾತನಾಡಿ, ಇಂಗ್ಲಿಷ್‌ನಲ್ಲಿರುವ ಕಾನೂನು ಪುಸ್ತಕಗಳನ್ನು ಕನ್ನಡ್ಕಕೆ ಭಾಷಾಂತರ ಮಾಡುವಾಗ ಎಚ್ಚರಿಕೆ ವಹಿಸಬೇಕು. ಅರ್ಥ ನಿಖರವಾಗಿರಬೇಕು. ಇಲ್ಲದಿದ್ದರೆ ಅನರ್ಥವಾಗುವುದೇ ಹೆಚ್ಚು ಎಂದರು.

ಕನ್ನಡ ಸಾಹಿತ್ಯ ಲೋಕದಲ್ಲಿ ಕಾನೂನು ಪುಸ್ತಕಗಳ ಕೊರತೆಯಿದೆ. ಅನುವಾದಗಳೂ ಕಡಿಮೆ ಇವೆ. ಈ ದಿಸೆಯಲ್ಲಿ ವಕೀಲರು ಹೆಚ್ಚು ಹೆಚ್ಚು ಅಧ್ಯಯನಶೀಲರಾಗಬೇಕು ಎಂದು ಆಶಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News