×
Ad

ಡಿ.ಸಿ.ತಮ್ಮಣ್ಣ ಅವರಿಗೆ ತಕ್ಕಪಾಠ ಕಲಿಸುತ್ತೇವೆ : ದಲಿತಪರ ಸಂಘಟನೆಗಳ ಮುಖಂಡರ ನಿರ್ಣಯ

Update: 2017-12-17 21:32 IST

ಮದ್ದೂರು, ಡಿ.17: ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕೆಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ದಲಿತ ಪರ ಸಂಘಟನೆಗಳ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.

ಕಳೆದ ನಾಲ್ಕೂವರೆ ವರ್ಷಗಳಿಂದ ತಾಲೂಕಿನ ವಳೆಗೆರೆಹಳ್ಳಿ, ಕುದರಗುಂಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ  ದಲಿತರ ಮೇಲೆ ತೀವ್ರ ದೌರ್ಜನ್ಯಗಳು ನಡೆದಿವೆ. ಆದರೆ, ಇದುವರೆಗೂ ಶಾಸಕರು ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ಸಾಂತ್ವನ ಹೇಳಲು ಮುಂದಾಗಿಲ್ಲ. ದಲಿತರ ಕುಂದುಕೊರತೆ ಸಭೆಗೆ ಶಾಸಕರು ಪಾಲ್ಗೊಂಡಿಲ್ಲ. ದಲಿತ ನೋವು ಸಂಕಷ್ಟಗಳನ್ನು ಆಲಿಸಿಲ್ಲ ಎಂದು ಮುಖಂಡರು ಆರೋಪಿಸಿದರು. 

ತಾಲೂಕು ಮಟ್ಟದಲ್ಲಿ ನಡೆಯುವ ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್ ರಾಂ ಜಯಂತಿಗಳಲ್ಲಿ ಶಾಸಕರು ಪಾಲ್ಗೊಂಡಿಲ್ಲ. ಕೇವಲ ಪರಿಶಿಷ್ಟ ಜಾತಿ ವರ್ಗಗಳ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ದಲಿತ ಕಾಲೋನಿಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನೇ ಮುಂದಿಟ್ಟುಕೊಂಡು ದಲಿತರ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಾ ದಲಿತರನ್ನು ಶಾಸಕ ತಮ್ಮಣ್ಣ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಇತ್ತೀಚೆಗೆ ನಡೆದ ಜೆಡಿಎಸ್ ದಲಿತ ಸಮಾವೇಶಕ್ಕೆ ತಾಲೂಕಿನಿಂದ ಯಾವುದೇ ದಲಿತರಿಗೆ ಆಹ್ವಾನ ನೀಡಿಲ್ಲ. ತಮ್ಮ ಬೆಂಬಲಿಗರ ಕೆಲವು ದಲಿತರು ಹಾಗು ಸವರ್ಣೀಯರನ್ನು ಸಮಾವೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ತಮ್ಮಣ್ಣ ಅವರನ್ನು ಮುಂದಿನ ಚುನಾವಣೆಯಲ್ಲಿ ದಲಿತರು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು ಎಂದು ಮನವಿ ಮಾಡಿದರು. 

ಇದೇ ಹಿನ್ನೆಲೆಯಲ್ಲಿ ಡಿ.31ರಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸಮಾವೇಶ ನಡೆಸಲಾಗುತ್ತಿದೆ. ತಾಲೂಕಿನಲ್ಲಿ 42 ಸಾವಿರಕ್ಕೂ ಹೆಚ್ಚು ದಲಿತರ ಮತಗಳಿದ್ದು, ಮುಂದಿನ ಚುನಾವಣೆಗೆ ದಲಿತರಿಂದಲೇ ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಣಕ್ಕಿಳಿಸಲು ಚಿಂತನೆ ನಡಸಲಾಗುತ್ತಿದೆ ಎಂದು ಮುಖಂಡರು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಂಠಿ ಸುರೇಶ್, ಮುಖಂಡರಾದ ಮರಳಿಗ ಶಿವರಾಜು, ಕೋಡಿಹಳ್ಳಿ ಗಿರಿಶ್, ಭಾನುಪ್ರಕಾಶ್, ಹೊಂಬಾಳೆ, ಕರಡಕೆರೆ ಯೋಗೇಶ್, ಅಂಬರೀಷ್, ಹುಲಿಗೆರೆಪುರ ಚಂದ್ರಶೇಖರ್, ಸೋಮು ಇತರರು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News