×
Ad

ಮನೆಯಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು : 14 ತಿಂಗಳ ನಂತರ ಪೊಲೀಸರಿಗೆ ಕೊಟ್ಟರು ದೂರು!

Update: 2017-12-17 22:16 IST
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಡಿ. 17: ಮನೆಯೊಂದರಲ್ಲಿ ನಡೆದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಕೃತ್ಯಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 14 ತಿಂಗಳ ನಂತರ ಮನೆಯವರು ಪೊಲೀಸರಿಗೆ ದೂರು ನೀಡಿರುವ ಕುತೂಹಲಕಾರಿ ಸಂಗತಿ ಶಿವಮೊಗ್ಗ ನಗರದಲ್ಲಿ ನಡೆದಿದೆ.

ದೂರುದಾರ ಭದ್ರಾವತಿ ತಾಲೂಕು ಅರೆಬಿಳಚಿ ಗ್ರಾಮದ ನಿವಾಸಿ ಮಧುಸೂದನ್ ಅವರ ಅಣ್ಣ ಸುರೇಶ್ ಎಂಬವರಿಗೆ ಸೇರಿದ ಮನೆಯಲ್ಲಿ ಈ ಕಳವು ಕೃತ್ಯ ನಡೆದಿತ್ತು. ಈ ದೂರಿನ ಆಧಾರದ ಮೇಲೆ ತುಂಗಾ ನಗರ ಠಾಣೆ ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಶಾಂತಮ್ಮ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕಳ್ಳರ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ: ದೂರುದಾರ ಮಧುಸೂದನ್ ಸಹೋದರ ಸುರೇಶ್‌ರವರಿಗೆ ಸೇರಿದ ಮನೆ ಶಿವಮೊಗ್ಗ ನಗರದ ನಂಜಪ್ಪಲೇಔಟ್ 1ನೇ ಕ್ರಾಸ್‌ನಲ್ಲಿದೆ. ಸುರೇಶ್ ಅವರು ಒರಿಸ್ಸಾ ರಾಜ್ಯದಲ್ಲಿರುವ ಜಿಂದಾಲ್ ಕಂಪೆನಿಯ ಉದ್ಯೋಗಿಯಾಗಿದ್ದು, ಶಿವಮೊಗ್ಗದ ಮನೆಯಲ್ಲಿ ನೆಲೆಸಿದ್ದ ಅವರ ಪತ್ನಿಯು ಬೆಂಗಳೂರಿನಲ್ಲಿ ಮಕ್ಕಳಿಗೆ ಇಂಜಿನಿಯರಿಂಗ್ ಸೀಟ್ ಸಿಕ್ಕಿದ್ದರಿಂದ ಬೆಂಗಳೂರಿಲ್ಲಿಯೇ ವಾಸವಾಗಿದ್ದಾರೆ.

ಸುರೇಶ್ ರಜೆ ಮೇಲೆ ಒರಿಸ್ಸಾದಿಂದ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಕುಟುಂಬ ಸದಸ್ಯರೊಂದಿಗೆ ಶಿವಮೊಗ್ಗದಲ್ಲಿರುವ ಮನೆಗೆ ಆಗಮಿಸಿ ಕೆಲ ದಿನಗಳ ಕಾಲ ತಂಗಿದ್ದರು. 2016ರ ಸೆ.3ರಂದು ತಮ್ಮ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹಿಂದಿರುಗಿದ್ದರು. ಅ.9, 2016ರಂದು ಸುರೇಶ್ ಒರಿಸ್ಸಾದಿಂದ ಬೆಂಗಳೂರಿಗೆ ಆಗಮಿಸಿ ಶಿವಮೊಗ್ಗದ ಮನೆಗೆ ಆಗಮಿಸಿ ವೇಳೆ ಮನೆಯಲ್ಲಿ ಕಳ್ಳತನ ನಡೆದಿದ್ದು ಬೆಳಕಿಗೆ ಬಂದಿತ್ತು.

ಒಟ್ಟಾರೆ 170 ಗ್ರಾಂ ತೂಕದ ವಿವಿಧ ಚಿನ್ನದ ಆಭರಣಗಳನ್ನು ಕಳ್ಳರು ಅಪಹರಿಸಿದ್ದರು. ಯಾವ ದಿನದಂದು ಚಿನ್ನಾಭರಣ ದೋಚಲಾಗಿದೆ ಎಂಬುವುದು ಗೊತ್ತಿರಲಿಲ್ಲ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸುರೇಶ್‌ರ ಸಹೆದರ ಮಧುಸೂದನ್ ತಿಳಿಸಿದ್ದಾರೆ.

‘ಘಟನೆ ಬೆಳಕಿಗೆ ಬಂದ ದಿನ ತಾನು ಕೂಡ ಮನೆಗೆ ಆಗಮಿಸಿದ್ದೆ. ಪೊಲೀಸರಿಗೆ ದೂರು ನೀಡುವಂತೆ ಸಹೋದರನಿಗೆ ತಿಳಿಸಿದ್ದೆ. ಆದರೆ ಒರಿಸ್ಸಾಕ್ಕೆ ಹೋಗಲು ಟಿಕೆಟ್ ಬುಕ್ ಆಗಿದೆ. ಪೊಲೀಸರಿಗೆ ದೂರು ನೀಡಿದರೆ ಪೊಲೀಸ್ ಠಾಣೆ, ನ್ಯಾಯಾಲಯವೆಂದು ಅಲೆದಾಡಬೇಕಾಗುತ್ತದೆ. ಅಷ್ಟೊಂದು ಸಮಯ ತನಗಿಲ್ಲ ಕೆಲಸಕ್ಕೆ ರಜೆ ಹಾಕಿ ಬಂದು ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಸಹೋದರ ಸುರೇಶ್ ತಿಳಿಸಿದ್ದರು. ಈ ಕಾರಣ ತಡವಾಗಿ ದೂರು ನೀಡುವಂತಾಯಿತು’ ಎಂದು ಮಧುಸೂದನ್ ಪೊಲೀಸರಿಗೆ ನೀಡಿರುವ ದೂರಿಲ್ಲಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News