ಹಿಂದೂಗಳು ಜಮ್ಮು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಲ್ಲ: ಸುಪ್ರೀಂ ಕೋರ್ಟಿಗೆ ಅಫಿದಾವಿತ್ ಸಲ್ಲಿಸಿದ ಸರಕಾರ

Update: 2017-12-18 09:46 GMT

ಹೊಸದಿಲ್ಲಿ, ಡಿ. 18: ಕಳೆದ ವಾರ ಸುಪ್ರೀಂ ಕೋರ್ಟಿನ ಮುಂದೆ ಜಮ್ಮು ಕಾಶ್ಮೀರದ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರವು ಸಲ್ಲಿಸಿದ ಅಫಿದಾವಿತ್ ನಲ್ಲಿ ತಿಳಿಸಲಾದಂತೆ ಜಮ್ಮು ಕಾಶ್ಮೀರವು ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವುದಿಲ್ಲ. ಕೇಂದ್ರದ ರಾಷ್ಟ್ರೀಯ ಅಲ್ಪಸಂಖ್ಯಾತರ ಪಟ್ಟಿಯನ್ನು ತಾನು ಅನುಸರಿಸುತ್ತಿರುವುದಾಗಿಯೂ ಸರಕಾರ ತಿಳಿಸಿದೆ.

ಕೇಂದ್ರದಿಂದ ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಗಳ ಕೇವಲ ಅರ್ಹ ಮತ್ತು ಅಗತ್ಯವಿರುವ ಸದಸ್ಯರಿಗೆ ಮಾತ್ರ ಕೇಂದ್ರ ಸರಕಾರದ ಯೋಜನೆಗಳ ಪ್ರಯೋಜನ ದೊರೆಯುವುದು ಎಂದು ರಾಜ್ಯ ಸರಕಾರ ಹೇಳುವ ಮೂಲಕ ರಾಜ್ಯದಲ್ಲಿ ಹಿಂದೂಗಳಿಗೆ ಇದು ಲಭ್ಯವಿಲ್ಲವೆಂಬುದನ್ನು ಸೂಚಿಸಿದೆ.

ಕೇಂದ್ರ ಸರಕಾರದ 1993ರ ಅಧಿಸೂಚನೆಯೊಂದು ಮುಸ್ಲಿಮರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿರುವುದನ್ನು ಜಮ್ಮು ಕಾಶ್ಮೀರ ಸರಕಾರದ ಅಫಿದಾವಿತ್ ಉಲ್ಲೇಖಿಸಿದೆ. ಈ ಪಟ್ಟಿಯಲ್ಲಿ ಸಿಖರು, ಕ್ರೈಸ್ತರು, ಬೌದ್ಧರು ಹಾಗೂ ಝೊರಾಸ್ಟ್ರಿಯನ್ನರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಲಾಗಿದ್ದರೆ ಜೈನ ಸಮುದಾಯವನ್ನು 2014ರಲ್ಲಿ ಸೇರಿಸಲಾಗಿತ್ತು.

ಒಂದು ವೇಳೆ ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯ ಒಂದು ರಾಜ್ಯದಲ್ಲಿ ಬಹುಸಂಖ್ಯಾತ ಸಮುದಾಯವಾಗಿದ್ದ ಸಂದರ್ಭ ಸೌಲಭ್ಯಗಳು ಉಳಿದ ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರ ದೊರೆಯುತ್ತವೆ.

ಜಮ್ಮು ಕಾಶ್ಮೀರ ಮತ್ತು ಏಳು ಇತರ ರಾಜ್ಯಗಳಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತ ಸಮುದಾಯವೆಂದು ಘೋಷಿಸಬೇಕೆಂದು ಕೋರಿ ಜಮ್ಮು ಮೂಲದ ವಕೀಲ ಅಂಕುರ್ ಶರ್ಮ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ಸಂಬಂಧ ವಿಚಾರಣೆ ನಡೆಯುತ್ತಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಆಯೋಗ ರಚಿಸಬೇಕೆಂದೂ ಶರ್ಮ ಕೋರಿದ್ದರು.

ಆಯೋಗ ರಚನೆ ಕುರಿತ ಸಲಹೆಯನ್ನು ಪರಿಶೀಲಿಸುವುದಾಗಿ ರಾಜ್ಯ ಸರಕಾರ ತಿಳಿಸಿದೆ. ತರುವಾಯ ಶರ್ಮ ಅವರ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಮಾರ್ಚ್ ತಿಂಗಳಲ್ಲಿ ಜಮ್ಮು ಕಾಶ್ಮೀರದ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ತಿಳಿಯಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಿತ್ತು. ಈ ಪ್ರಕರಣದ ಮುಂದಿನ ವಿಚಾರಣೆ ಜನವರಿಯಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News