ಮಹಿಳೆ ಮುಖಕ್ಕೆ ಮತ್ತು ಬರುವ ಸ್ಪ್ರೇ ಮಾಡಿ ಚಿನ್ನಾಭರಣ ದೋಚಿದ ಕಳ್ಳಿ
ಮೈಸೂರು,ಡಿ.18: ಮಹಿಳೆಯ ಮುಖಕ್ಕೆ ಪ್ರಜ್ಞೆ ತಪ್ಪುವಂತಹ ಸ್ಟ್ರೇ ಮಾಡಿ ಚಿನ್ನಾಭರಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ವಿದ್ಯಾರಣ್ಯಪುರಂ ನಿವಾಸಿ ನಾಗಮ್ಮ ಅವರು ಈ ವಂಚನೆ ಜಾಲಕ್ಕೆ ಸಿಲುಕಿ ಚಿನ್ನ ಕಳೆದುಕೊಂಡವರು. ಇವರು ನೂರಡಿ ರಸ್ತೆಯ ಸಹಕಾರ ಭವನದ ಮುಂದೆ ನಡೆದುಕೊಂಡು ಹೋಗುವಾಗ ಕಳ್ಳಿಯೊಬ್ಬಳು ತನ್ನ ಕೈ ಚಳಕ ತೋರಿದ್ದಾಳೆ. ಇವರ ಬಳಿ ಬಂದ ಕಳ್ಳಿ, ನನ್ನ ತಂಗಿಗೆ ಹುಷಾರಿಲ್ಲ, ಇಲ್ಲಿ ಯಾವುದಾದರೂ ಆಸ್ಪತ್ರೆಗೆ ತೋರಿಸಬೇಕು ಒಳ್ಳೆಯ ಆಸ್ಪತ್ರೆ ಇದೆಯೇ ಎಂದು ಕೇಳಿದ್ದಾಳೆ.
ಅದಕ್ಕೆ ಮಹಿಳೆ ತನಗೆ ಗೊತ್ತಿಲ್ಲವೆಂದು ಹೇಳಿ ಮುಂದೆ ಸಾಗುತ್ತಿದ್ದಾಗ ಹಿಂದಿನಿಂದ ಬರುತ್ತಿದ್ದ ಕಳ್ಳಿ, ಮಹಿಳೆಯ ಮುಖಕ್ಕೆ ಹಿಂದಿನಿಂದಲೇ ಮತ್ತು ಬರುವ ಸ್ಪ್ರೇ ಮಾಡಿದ್ದಾಳೆ. ಕೂಡಲೇ ಮಹಿಳೆ ತಲೆ ಸುತ್ತಿ ಕುಸಿದು ಬಿದಿದ್ದು, ಆಗ ಕಳ್ಳಿನಾಗಮ್ಮ ಅವರ 30 ಗ್ರಾಂ ಚಿನ್ನದ ಮಾಂಗಲ್ಯ ಕಸಿದು ಪರಾರಿಯಾಗಿದ್ದಾಳೆ.
ಸರ ಕಳೆದುಕೊಂಡು ಮಹಿಳೆ ಪ್ರಜ್ಞೆ ಬಂದು ಕಣ್ಣು ತೆರೆದು ನೋಡಿದಾಗ, ಕತ್ತಿನಲ್ಲಿದ್ದ ಚಿನ್ನದ ಸರ ಮಾಯವಾಗಿರುವುದು ಕಂಡು ಬಂದಿದೆ. ಬಳಿಕ ತನ್ನ ಕುಟುಂಬದವರಿಗೆ ವಿಷಯ ತಿಳಿಸಿ, ನಂತರ ಕೆ.ಆರ್. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜನಜಂಗುಳಿ ನಡುವೆ ಈ ರೀತಿ ಮಾಡಿರುವುದು ಸಾರ್ವಜನಿಕರಿಗೆ ಅಚ್ಚರಿ ಹಾಗೂ ಭಯ ಮೂಡಿಸಿದೆ. ಒಬ್ಬಂಟಿಯಾಗಿ ನಗರದಲ್ಲಿ ತಿರುಗಾಡುವ ಮಹಿಳೆಯರು ಈ ಬಗ್ಗೆ ಎಚ್ಚರದಿಂದ ಇರಬೇಕಾಗಿದೆ.