ರಾಜಧಾನಿಯಲ್ಲೇ ಕನ್ನಡ ಕಣ್ಮರೆಯಾಗುತ್ತಿದೆ: ಮನು ಬಳಿಗಾರ್

Update: 2017-12-18 17:21 GMT

ಶಿವಮೊಗ್ಗ, ಡಿ. 18: ಕನ್ನಡದ ಮೇಲೆ ಎಷ್ಟೇ ದಾಳಿಗಳು ನಡೆದರೂ ಕನ್ನಡ ಕಣ್ಮರೆಯಾಗುವುದಿಲ್ಲ. ಆದರೆ ತನ್ನ ವಿಶಿಷ್ಟ ರೂಪವನ್ನು ಮತ್ತು ಹೊಳಪನ್ನು ಕಳೆದುಕೊಳ್ಳಬಹುದೆಂದು ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಹೇಳಿದ್ದಾರೆ.

ನಗರದಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ 12ನೆಯ ಜಿಲ್ಲಾ ಕನ್ನಡ ಸಾಹಿತ್ಯಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡದ ಸ್ಥಿತಿಗತಿ ಯಾವ ಮಟ್ಟದಲ್ಲಿ ಇರಬೇಕಿತ್ತೋ ಆ ಮಟ್ಟದಲ್ಲಿ ಇಲ್ಲ ಎನ್ನುವ ಕೊರಗು ಇಂದಿಗೂ ಇದೆ. ಕನ್ನಡದ ಭಾಷೆಯನ್ನು ರಾಜಧಾನಿಯಲ್ಲಿ ಪಸರಿಸಬೇಕಾದ ಸ್ಥಿತಿ ಇದೆ. ರಾಜಧಾನಿಯಲ್ಲೇ ಕನ್ನಡ ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿ ಎಂದ ಅವರು, ಇದನ್ನು ತಪ್ಪಿಸಲು ಪ್ರತೀ ವಾರ ರಾಜಧಾನಿಯ ಒಂದೊಂದು ಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮವನ್ನು ವಿಶಿಷ್ಟ ರೂಪದಲ್ಲಿ ನಡೆಸಲಾಗುತ್ತಿದೆ ಎಂದರು.

ರಾಜ್ಯ ಕಸಾಪ ವತಿಯಿಂದ ಹಳಗನ್ನಡ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಈಗಾಗಲೇ 9ಜಿಲ್ಲೆಗಳಲ್ಲಿ ಇದು ಮುಕ್ತಾಯವಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸುಮಾರು ಹದಿನೈದು ವಿದ್ವಾಂಸರು ಇದನ್ನು ನಡೆಸಿಕೊಡುತ್ತಿದ್ದಾರೆ. ಸರಕಾರದಿಂದ ಅತೀ ಹೆಚ್ಚಿನ ಅನುದಾನ ಕನ್ನಡ ಮತ್ತು ಸಂಸ್ಕೃತಿಗೆ ಇತ್ತೀಚಿನ ವರ್ಷಗಳಲ್ಲಿ ಹರಿದು ಬರುತ್ತಿರುವುದರಿಂದ ಸತತವಾಗಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ರಾಜ್ಯದಲ್ಲಿ ಕನ್ನಡದ ಸ್ಥಿತಿ ಕಷ್ಟದಲ್ಲಿದೆ. ಅಧಿಕಾರಿಗಳು ಕನ್ನಡದ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಬೇಕಿದೆ. ಕನ್ನಡದಲ್ಲಿ ಯಾವ ಪ್ರಸ್ತಾವನೆಯನ್ನು ಸರಕಾರಕ್ಕೆ ಅವರು ಸಲ್ಲಿಸುತ್ತಿಲ್ಲ. ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿ ಅದನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಪ್ರಸ್ತಾವನೆ ಸಲ್ಲಿಸುತ್ತಿದ್ದಾರೆ. ವಿಧಾನಸೌಧದಲ್ಲಿ ಎಲ್ಲಾ ದಾಖಲೆಗಳು ಇಂಗ್ಲಿಷ್‌ಮಯವಾಗಿದೆ ಎಂದು ಬೇಸರಿಸಿದರು. ಅಧ್ಯಕ್ಷತೆಯನ್ನು ಸಾಹಿತಿ ಮತ್ತು ಚಿಂತಕ ಶ್ರೀಕಂಠ ಕೂಡಿಗೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ. ಶಂಕರಪ್ಪ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಪ್ರೊ. ಕೆ. ಸಣ್ಣರಾಮ, ಜಿಪಂ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸ್ಬುಡಾ ಅಧ್ಯಕ್ಷ ಇಸ್ಮಾಯಿಲ್ ಖಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News