ಹೊನ್ನಾವರ: ಅನಿರ್ದಿಷ್ಟಾವಧಿ ಬಂದ್ ವಾಪಸ್
ಹೊನ್ನಾವರ, ಡಿ.18: ಗಲಭೆ ಮತ್ತು ಪರೇಶ್ ಮೇಸ್ತ ನಿಗೂಢ ಸಾವಿನ ಪ್ರಕರಣದ ನಂತರ ಹಿಂದೂಗಳ ಬಂಧನ ಖಂಡಿಸಿ ವರ್ತಕರು ಕರೆ ನೀಡಿದ್ದ ಅಂಗಡಿಗಳ ಅನಿರ್ದಿಷ್ಟಾವಧಿ ಬಂದ್ ವಾಪಸ್ ಪಡೆದ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟುಗಳು ನಿರಾತಂಕವಾಗಿ ನಡೆದವು.
ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರವಿವಾರ ಸಂಜೆ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದ ಎಸ್ಪಿ ವಿನಾಯಕ ಪಾಟೀಲ್ ಹಾಗೂ ಉಡುಪಿ ಎಸ್ಪಿ ಸಂಜೀವ ಪಾಟೀಲ್ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದರು. ಈ ಭರವಸೆಯ ಹಿನ್ನೆಲೆಯಲ್ಲಿ ಸ್ಥಳಿಯ ಮುಖಂಡರು ವರ್ತಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಆಗ ಬಂದ್ ವಾಪಸ್ ಪಡೆಯಲು ಸಹಮತ ವ್ಯಕ್ತಪಡಿಸಿದ್ದಾರೆ.
ಸಹಜ ಸ್ಥಿತಿಗೆ ಮರಳಿದ ಹೊನ್ನಾವರ:ಕಳೆದ ಡಿ. 6 ರಿಂದ ಗಲಭೆ ಮತ್ತು ಪರೇಶ ನಿಗೂಢ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಸುಮಾರು 10 ದಿನಗಳ ಕಾಲ ಅಂಗಡಿ ಮುಂಗಟ್ಟುಗಳು ವಿವಿಧ ಘಟನೆಗಳಿಂದ ಉದ್ವಿಗ್ನಗೊಂಡು ಅಘೋಷಿತ ಬಂದ್ ನಡೆದಿತ್ತು. ಇದರಿಂದ ಕಂಗೆಟ್ಟು ಹೋದ ಸಾರ್ವಜನಿಕರು ಹಾಗೂ ಅಂಗಡಿಕಾರರು ಭಯದ ವಾತಾವರಣ ತಿಳಿಯಾದ ಹಿನ್ನೆಲೆಯಲ್ಲಿ ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದರು. ಬಸ್ಸು ಖಾಸಗಿ ವಾಹನಗಳು ಎಂದಿನಂತೆ ಓಡಾಡಿದವು. ಗ್ರಾಮೀಣ ಭಾಗದಿಂದ ಜನರು ಪಟ್ಟಣಕ್ಕೆ ಬಂದು ವ್ಯವಹಾರ ವಹಿವಾಟು ನಡೆಸಿದರು.
ಹೊನ್ನಾವರ ತಾಲೂಕಿನ ಹಲವೆಡೆ ಪೊಲೀಸ್ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಗ್ರಾಮೀಣ ಭಾಗದ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಮತ್ತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ನಿಗಾ ವಹಿಸಿದ್ದಾರೆ. ಮಾಗೋಡ ಪ್ರಕರಣ:ಹೊನ್ನಾವರ ತಾಲೂಕಿನ ಮಾಗೋಡ ಕೊಡ್ಲಗದ್ದೆ ಗ್ರಾಮದ ಬಾಲಕಿಗೆ ಕಿರುಕುಳ ನೀಡಿರುವ ಹಿನ್ನೆಲೆಯಲ್ಲಿ ತಲೆಮರಿಸಿಕೊಂಡಿರುವ ಪ್ರಮುಖ ಆರೋಪಿ ಗಣೇಶ ನಾಯ್ಕ ಎಂಬಾತನನ್ನು ಬಂಧಿಸಲು ಪೊಳಿಸರು ತನಿಖೆ ಮುಂದುವರಿಸಿದ್ದಾರೆ.
ಕಿರುಕುಳ ನೀಡಿರುವ ಬಗ್ಗೆ ಬಾಲಕಿಯ ಹೇಳಿಕೆ ಪಡೆದು ಪೋಕ್ಸೋ (ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ) ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಬಂಧನದ ನಂತರ ಉಳಿದ ಮಾಹಿತಿ ನೀಡಲಾಗುವುದು. ಗಲಭೆ ಉಂಟುಮಾಡಿದವರನ್ನು, ಶಾಂತಿಕದಡಲು ಯತ್ನಿಸಿದವರನ್ನು ಬಂಧಿಸಲು ತಂಡ ರಚನೆ ಮಾಡಲಾಗಿದ್ದು, ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಕಿಡಿಗೇಡಿಗಳು ಶಾಂತಿ ಕದಡುವ, ಕೋಮು ಸಾಮರಸ್ಯ ಹಾಳು ಮಾಡುವ ಉದ್ದೇಶದಿಂದ ಜನರನ್ನು ಭಾವೋದ್ವೇಗಗೊಳಿಸಿ ಗಲಭೆ ಉಂಟುಮಾಡುವ, ಪ್ರಚೋದಿಸುವ, ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬಿಸುತ್ತಿದ್ದು ಸಾರ್ವಜನಿಕರು ಈ ಬಗ್ಗೆ ಗಮನ ನೀಡಬಾರದು. ಸುಳ್ಳು ಸುದ್ದಿ ಹಬ್ಬಿಸುವುದು ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ 948080805200 ಈ ಸಂಖ್ಯೆಗೆ ಕರೆ ಮಾಡಬಹುದೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.