ನಿವೇಶನ ಪರಿಶೀಲನೆಗೆ ಅಡ್ಡಿಪಡಿಸುತ್ತಿರುವ ಗ್ರಾಪಂ ಸದಸ್ಯ: ಆರೋಪ

Update: 2017-12-18 18:05 GMT

ಬಾಗೇಪಲ್ಲಿ, ಡಿ.18: 2017-18ನೇ ಸಾಲಿನ ಅಂಬೇಡ್ಕರ್ ಯೋಜನೆಯ ನಿವೇಶನಗಳ ಪರಿಶೀಲನೆಯ ಸಂದರ್ಭ ಭಾವಚಿತ್ರ ತೆಗೆಸಲು ಗ್ರಾಪಂ ಸದಸ್ಯರೊಬ್ಬರು ಅಡ್ಡಿಪಡಿಸುತ್ತಿದ್ದು, ಫೊಟೋ ತೆಗೆಯಬೇಕಾದರೆ 10 ಸಾವಿರ ರೂ. ನೀಡಬೇಕು ಎಂಬ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಫಲಾನುಭವಿಗಳು ತಾಪಂ ಕಚೇರಿ ಮುಂಭಾಗ ಧರಣಿ ನಡೆಸಿದರು.

ತಾಲೂಕಿನ ಗೂಳೂರು ಹೋಬಳಿ ನಲಪ್ಪ ರೆಡ್ಡಿಪಲ್ಲಿ ಗ್ರಾಪಂಗೆ ಸೇರಿದ ಜಿಲಾಜಿರ್ಲ ಗ್ರಾಮದ ಪಿಡಿಒ ನಾರಾಯಣಸ್ವಾಮಿ ಕಾರ್ಯದರ್ಶಿ ಗಂಗರಾಜು ಜಿಲಾಜಿರ್ಲ ಗ್ರಾಮಕ್ಕೆ ತೆರಳಿ ಫಲಾನುಭವಿಗಳ ಜೊತೆ ಭಾವಚಿತ್ರ ತೆಗೆಸುತ್ತಿದ್ದಾಗ ಇದೇ ಗ್ರಾಪಂನ ಸದಸ್ಯರಾದ ಅಕ್ಕುಲಪ್ಪಎಂಬವವರು ಸ್ಥಳಕ್ಕೆ ದಾವಿಸಿ ನೀವು ಫೊಟೋ ತೆಗೆಯಬೇಡಿ, ನಾನು ಫಲಾನುಭವಿಗಳ ಜೊತೆ ಭಾವಚಿತ್ರ ತೆಗೆಯುತ್ತೇನೆ ಎಂದರಲ್ಲದೇ, ಜೊತೆಗೆ 10 ಸಾವಿರ ರೂ. ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಬೆದರಿಕೆ ಒಡ್ಡುತ್ತಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದರು.

ದಲಿತರಾದ ನಾವು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ ಸರಕಾರಿ ಸೌಲಭ್ಯಗಳನ್ನು ಪಡೆಯಬೇಕಾದರೆ ಲಂಚ ನೀಡಬೇಕೆ?. ಸಾಮಾನ್ಯವಾಗಿ ಫಲನುಭವಿಗಳ ಜೊತೆ ಭಾವಚಿತ್ರ ತೆಗೆಯಬೇಕಾದರೆ ಪಿಡಿಒ ಅಥವಾ ಕಾರ್ಯದರ್ಶಿ ಇವರಿಬ್ಬರೂ ಇಲ್ಲದಿದ್ದರೆ ಕರ ವಸೂಲಿಗಾರ ಜೊತೆ ತೆಗೆಯಬಹುದು. ಆದರೆ ಈ ಗ್ರಾಮದಲ್ಲಿ ಸದಸ್ಯನೇ ಫಲಾನುಭವಿಗಳ ಜೊತೆ ಭಾವಚಿತ್ರ ತೆಗೆಸಬೇಕು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರಲ್ಲದೆ, ಗ್ರಾಪಂ ಸದಸ್ಯನ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.ಈ ಬಗ್ಗೆ ಪಿಡಿಒ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ಫಲಾನುಭವಿಗಳ ಜೊತೆ ಭಾವಚಿತ್ರ ತೆಗೆಸಬೇಕಾದರೆ ಕಡ್ಡಾಯವಾಗಿ ಸರಕಾರಿ ನೌಕರರೇ ಇರಬೇಕು ಎಂದರು.ಈ ಸಂದರ್ಭದಲ್ಲಿ ಆದಿನಾರಾಯಣಪ್ಪ, ಏಟಪ್ಪ, ನಾರಾಯಣಸ್ವಾಮಿ, ಟಿ.ನರಸಪ್ಪ, ಗಂಗಾದರ, ಚಿನ್ನನರಸಿಂಹಪ್ಪ, ಸೂರಿ, ಹನುಮಂತಪ್ಪ, ನಾರಾಯಣಮ್ಮ, ರಾಧಮ್ಮ, ಲಕ್ಷ್ಮೀ ಸದ್ಯಮ್ಮ, ನಾರಾಯಣಮ್ಮ, ರೇಣುಕಮ್ಮ, ಗಂಗರತ್ನಮ್ಮ ಸೇರಿದಂತೆ ಫಲಾನುಭವಿಗಳು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News