ಮುಖ್ಯ ರಸ್ತೆಯಲ್ಲಿ ಕಾಡಾನೆಗಳ ಹಿಂಡು: ಆತಂಕದಲ್ಲಿ ಗ್ರಾಮಸ್ಥರು

Update: 2017-12-18 18:13 GMT

ಸಿದ್ದಾಪುರ,ಡಿ.18: ವಿರಾಜಪೇಟೆಯ ಮಾರ್ಗ ನಡುವಿನ ಇಂಜಿಲಗೆರೆಯ ಮುಖ್ಯರಸ್ತೆಯಲ್ಲಿ ರವಿವಾರ ಸಂಜೆ ಏಕಾಏಕಿ ಕಾಡಾನೆಗಳ ಹಿಂಡು ಕಾಣಿಸಿಕೊಂಡು ತಲ್ಲಣ ಸೃಷ್ಟಿಸಿದವು. ಇದರಿಂದಾಗಿ ಕೆಲಕಾಲ ವಾಹನ ಸಂಚಾರವೂ ಸ್ಥಗಿತಗೊಂಡಿತು.

ಈ ಸಂದಭರ್ ಕಾಫಿ ತೋಟದ ಕಾರ್ಮಿಕರಿಗೆ ಕೆಲಸ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ ಅರಣ್ಯ ಇಲಾಖೆ, ಅರಣ್ಯ ಇಲಾಖೆಯ ದೇವಯ್ಯ ನೇತೃತ್ವದ ಆರ್‌ಆರ್‌ಟಿ ತಂಡದ ಸದಸ್ಯರು ಕಾಡಾನೆಗಳನ್ನು ಓಡಿಸುವಲ್ಲಿ ಸಫಲರಾದರು. ಪುಲಿಯೇರಿ, ಗುಹ್ಯ, ಆನಂದಪುರ, ಬೀಟೆಕಾಡು, ಇಂಜಿಲಗೆರೆ ವ್ಯಾಪ್ತಿಯಲ್ಲಿ ದಿನನಿತ್ಯ ಏಳು ಮರಿಯಾನೆಗಳ ಸಹಿತ ಸುಮಾರು 25 ಕಾಡಾನೆಗಳ ಹಿಂಡು ಕಾಫಿತೋಟದಲ್ಲಿ ಬೀಡುಬಿಟ್ಟಿರುತ್ತವೆ. ಕಾಫಿ ಕೊಯ್ಲಿನ ಸಮಯದಲ್ಲಿ ಕಾಡಾನೆಗಳು ದಾಳಿ ಮಾಡಿ, ಕಾಫಿ ಹಣ್ಣುಗಳು ನೆಲಕ್ಕುರುಳಿ ಅಪಾರ ನಷ್ಟ ಸಂಭವಿಸುತ್ತಿದ್ದು, ಮತ್ತೊಂದೆಡೆಯಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಹೈರಾಣಾಗುತ್ತೇವೆ ಎಂದು ಕಾಫಿ ತೋಟದ ಮಾಲಕರೊಬ್ಬರು ಹೇಳಿದ್ದಾರೆ.

ನಿರಂತರ ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮಸ್ಥರು ಸಂಕಷ್ಟವನ್ನು ಅನುಭವಿಸುತ್ತಿದ್ದ ಆ ಕಾಡಾನೆಗಳನ್ನು ಒಂದು ಕಡೆಯಿಂದ ಓಡಿಸಿದರೆ ಮತ್ತೊಂದು ಕಡೆ ದಾಂಧಲೆ ಎಬ್ಬಿಸುತ್ತಿವೆ. ಈ ನಿಟ್ಟಿನಲ್ಲಿ ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ಅಮ್ಮತ್ತಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತೀಶ್ ಅರಣ್ಯ ಇಲಾಖೆಯನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News