ಇವಿಎಂ ಪರಿಶೀಲನೆಗೆ ಅವಕಾಶ ಕಲ್ಪಿಸಿ : ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ, ಡಿ. 19: ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಸಂಶಯವಿದ್ದು, ಅವುಗಳ ಪರಿಶೀಲನೆಗಾಗಿ ‘ಹ್ಯಾಕಥಾನ್’ಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಬೇಕು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಜಗತ್ತಿನಲ್ಲಿಯೇ ಹೆಸರು ಮಾಡಿದೆ. ಮಾಹಿತಿ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳು, ನವೋದ್ಯಮ, ತಾಂತ್ರಿಕ ಪರಿಣತರಿಗೆ ಮತಯಂತ್ರಗಳ ಪರಿಶೀಲನೆಗೆ ಅವಕಾಶ ಕಲ್ಪಿಸಬೇಕೆಂದು ಕೋರಿದರು.
ಚುನಾವಣಾ ಆಯೋಗದ ಉಸ್ತುವಾರಿಯಲ್ಲೇ ಶೇ.10ರಷ್ಟು ವಿದ್ಯುನ್ಮಾನ ಮತಯಂತ್ರಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಇದಕ್ಕೆ ಸೂಕ್ತ ಕಾಲಾವಕಾಶ ನೀಡಬೇಕು. ದೋಷವಿದ್ದರೆ ಎಲ್ಲರೂ ಸೇರಿ ಅವುಗಳನ್ನು ಸರಿಪಡಿಸಬೇಕು ಎಂದು ಅವರು ಸಲಹೆ ಮಾಡಿದರು.
ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ಮುಖ್ಯಮಂತ್ರಿ ಸೂಚಿಸಿದ್ದು, ಶೀಘ್ರದಲ್ಲೆ ಆಯೋಗಕ್ಕೆ ಪತ್ರ ರವಾನಿಸಲಾಗುವುದು ಎಂದ ಅವರು, ನಾನು ಇವಿಎಂ ಯಂತ್ರಗಳ ವಿರೋಧಿ ಅಲ್ಲ. ಮತಯಂತ್ರಗಳಲ್ಲಿ ದೋಷ ಇದೆ ಎಂಬ ಕಾರಣಕ್ಕೇ ಮುಂದುವರೆದ ದೇಶಗಳಲ್ಲಿ ಮರಳಿ ಮತಪತ್ರ ಬಳಸಲಾಗುತ್ತಿದೆ.
ಚುನಾವಣೆಯಲ್ಲಿ ಮತಪತ್ರ ಬಳಸಿ ಎಂಬ ನಮ್ಮ ಬೇಡಿಕೆ ಪ್ರಜಾತಂತ್ರದ ವಿರೋಧಿ ಅಲ್ಲ ಎಂದ ಅವರು, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮತಯಂತ್ರಗಳ ದುರ್ಬಳಕೆಯ ಬಗ್ಗೆಯೂ ಸಂಶಯವಿದೆ ಎಂದು ಪ್ರಿಯಾಂಕ್ ಖರ್ಗೆ ಇದೇ ವೇಳೆ ಅನುಮಾನ ವ್ಯಕ್ತಪಡಿಸಿದರು.