ಮಂಡ್ಯ : ಡಿ.20ರಂದ ನಾಲೆಗಳಿಗೆ ನೀರು ಬಿಡುಗಡೆ
ಮಂಡ್ಯ, ಡಿ.19: ನಾಳೆಯಿಂದ ಹತ್ತುದಿನ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ (ಕೆಆರ್‍ಎಸ್) ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಲು ಮಂಗಳವಾರ ಜಿಪಂ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಲಾಶಯದ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿದೆ.
ಜಲಾಶಯದಲ್ಲಿ 107.80 ಅಡಿ ನೀರಿದ್ದು, 330 ಕ್ಯೂಸೆಕ್ಸ್ ಒಳ ಹರಿವು, 408 ಕ್ಯೂಸೆಕ್ಸ್ ಹೊರ ಹರಿವಿದೆ ಎಂದು ಕೃಷ್ಣರಾಜಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನೆಗಳ ವೃತ್ತದ ಅಧೀಕ್ಷಕ ಅಭಿಯಂತರ ವಿಜಯಕುಮಾರ್ ಸಭೆಗೆ ಮಾಹಿತಿ ನೀಡಿದರು.
ಈ ಕುರಿತು ಶಾಸಕರ ಜತೆ ಸಮಾಲೋಚನೆ ನಡೆಸಿದ ಸಚಿವರು, ನಾಳೆಯಿಂದಲೇ ಹತ್ತುದಿನ ನಾಲೆಗಳಿಗೆ ನೀರುಹರಿಸಲಾಗುವುದು. ಜನವರಿ 5ರ ನಂತರ, ಮತ್ತೊಮ್ಮೆ ಸಭೆ ಕರೆದು ಚರ್ಚಿಸಿ ಬೇಸಗೆ ಬೆಳೆಗೆ ನೀರು ಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಕೆ.ಎಸ್.ಪುಟ್ಟಣ್ಣಯ್ಯ, ಡಿ.ಸಿ.ತಮ್ಮಣ್ಣ, ಕೆ.ಸಿ.ನಾರಾಯಣಗೌಡ ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಶರತ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಕಾವೇರಿ ನೀರಾವರಿ ಸಲಹಾ ಸಮಿತಿಯ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.