ಆರ್ಹ ಫಲಾನುಭವಿಗಳು ಮಾತ್ರ ಮನೆ ಪಡೆಯಬೇಕು : ಡಾ.ಜಿ ಪರಮೇಶ್ವರ್
ತುಮಕೂರು,ಡಿ.19: ಚಿಕ್ಕತೋಟ್ಲುಕೆರೆ ಗ್ರಾಮ ಪಂಚಾಯತ್ ಗೆ 100 ಮನೆಗಳನ್ನು ಕಾಂಗ್ರೆಸ್ ಸರಕಾರ ಮಂಜೂರು ಮಾಡಿದ್ದು, ಅರ್ಹ ಫಲಾನುಭವಿಗಳಿಗೆ ಮಾತ್ರ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ತುಮಕೂರು ಗ್ರಾಮಾಂತರದ ಚಿಕ್ಕತೋಟ್ಲುಕೆರೆ ಗ್ರಾಮ ಪಂಚಾಯತ್ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಕಾಂಗ್ರೆಸ್ ಸರಕಾರದಿಂದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಗಳಿಗೆ 100 ಮನೆಗಳನ್ನು ಮಂಜೂರು ಮಾಡಲಾಗಿದೆ.ಸರಕಾರ ಬಡವರಿಗೆ ನೀಡಿರುವ ಮನೆಗಳನ್ನು ಕಡು ಬಡವರು ಹಾಗೂ ಮನೆ ಇಲ್ಲದವರು ಮಾತ್ರ ಪಡೆಯಬೇಕಿದೆ.ಕಾಂಗ್ರೆಸ್ ಸರಕಾರ ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.ಅದರಂತೆ ಬಡವರು ಶಾಶ್ವತ ಸೂರು ಕಟ್ಟಿಕೊಳ್ಳಲು ಮನೆಗಳನ್ನು ಕೂಡ ನೀಡಲಾಗಿದೆ.ಬಡವರಿಗೆ ಮೀಸಲಿಟ್ಟಿರುವ ಮನೆಗಳನ್ನು ಬಡವರಿಗಾಗಿಯೇ ನೀಡಬೇಕು,ಹಾಲಿ ಮನೆಗಳು ಇರುವವರು ಯಾವುದೇ ಕಾರಣಕ್ಕೂ ಮನೆಗಳನ್ನು ಪಡೆಯಬಾರದು ಎಂದು ತಿಳಿಸಿದರು.
ಈ ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನ ಜಾರಿಗೆ ತರುವುದಾಗಿ ಮುಖ್ಯಮಂತ್ರಿಗಳ ಜತೆ ಮಾತು ಕತೆ ನಡೆಸಿದೆ.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೂ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ,ಕುಡಿಯುವ ನೀರು ಇನ್ನೀತರೆ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದರು.
ಶಾಸಕ ಸುಧಾಕರ್ ಮಾತನಾಡಿ,ಬಡವರಿಗಾಗಿ ನೀಡಿರುವ ಮನೆಗಳನ್ನು ವಿತರಿಸುವಲ್ಲಿ ಹಣ ಪಡೆಯಬಾರದು,ಬಡವರು,ಕೂಲಿ ಕಾರ್ಮಿಕರು ಹೆಚ್ಚು ಹಣ ವ್ಯಯ ಮಾಡಿ ಮೆನೆಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಡವರಿಗೆ ಮೀಸಲಿಟ್ಟಿರುವ ಮನೆಗಳನ್ನು ಬಡವರಿಗೆ ವಿತರಿಸಬೇಕು.ಪಂಚಾಯಿತಿಗಳಲ್ಲಿ ಲಭ್ಯವಿರುವ ಮನೆಗಳನ್ನು ಪಡೆಯಲು ಕಿತ್ತಾಟ ಶುರುವಾಗುತ್ತಿದೆ. ಉಳ್ಳವರು ಕೂಡ ಮನೆಗಳನ್ನು ಪಡೆಯಲು ಬರುತ್ತಿದ್ದಾರೆ.ಆದರೆ ಪಂಚಾಯತ್ ಅಧಿಕಾರಿಗಳು ಮತ್ತು ಚುನಾಯಿತಿ ಪ್ರತಿನಿಧಿಗಳು ಕಿತ್ತಾಟಕ್ಕೆ ಅವಕಾಶ ಮಾಡಿಕೊಡದೆ ಮನೆಗಳನ್ನು ವಿತರಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನರಸೇಗೌಡ,ಎಪಿಎಂಸಿ ಅಧ್ಯಕ್ಷ ಗಂಗಾಧರಯ್ಯ,ತಾಲೂಕು ಪಂಚಾಯಿತಿಯ ಇಒ ಡಾ.ಕೆ.ನಾಗಣ್ಣ,ಕಾಂಗ್ರೆಸ್ ಮುಖಂಡ ಯದುನಂದನ್,ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತು ಉಪಾಧ್ಯಕ್ಷರು,ಸದಸ್ಯರು ಭಾಗವಹಿಸಿದ್ದರು.