ಚಿಕ್ಕಮಗಳೂರಿನಲ್ಲಿ ಸೌಹಾರ್ದ ಸಮಾವೇಶ : ಶಿವಮೊಗ್ಗದಲ್ಲಿ ಕೋಸೌವೇಯಿಂದ ಪೊಸ್ಟರ್ ಬಿಡುಗಡೆ
ಶಿವಮೊಗ್ಗ, ಡಿ. 19: ಚಿಕ್ಕಮಗಳೂರಿನಲ್ಲಿ ಡಿ. 28 ಹಾಗೂ 29 ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಸೌಹಾರ್ದ ಸಮಾವೇಶಕ್ಕೆ ಸಂಬಂಧಿಸಿದಂತೆ ಸಿದ್ದಪಡಿಸಲಾಗಿರುವ ಪೋಸ್ಟರ್ ಬಿಡುಗಡೆ ಸಮಾರಂಭವನ್ನು ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಮ್ಮಿಕೊಂಡಿತ್ತು.
ಕೋಸೌವೇಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ವಕೀಲ ಕೆ.ಪಿ.ಶ್ರೀಪಾಲ್, ಕುಮಾರ್, ಅನನ್ಯ ಶಿವು, ಡಿ.ಎಸ್.ಎಸ್. ಸಂಘಟನೆಯ ಹಾಲೇಶಪ್ಪ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಳೆದ ಸುಮಾರು 15 ವರ್ಷಗಳಿಂದ ರಾಜ್ಯದಲ್ಲಿ ಶಾಂತಿ, ಸಹಬಾಳ್ವೆ, ಸೌಹಾರ್ದತೆಗೆ ಶ್ರಮಿಸುತ್ತಿರುವ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಚಿಕ್ಕಮಗಳೂರಿನಲ್ಲಿ ಡಿ. 28 ಹಾಗೂ 29 ರಂದು ಬೃಹತ್ ಸೌಹಾರ್ದ ಸಮಾವೇಶ ಆಯೋಜಿಸಿದೆ. ಈ ಸಮಾವೇಶಕ್ಕೆ ದೇಶ ಹಾಗೂ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸೌಹಾರ್ದ ಪ್ರೇಮಿಗಳು ಭಾಗವಹಿಸುತ್ತಿದ್ದಾರೆ ಎಂದು ಕೋಸೌವೇ ಮುಖಂಡ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.
ಈ ಸಮಾವೇಶವು ಬಹ ಧರ್ಮೀಯ, ಬಹು ಸಂಸ್ಕೃತಿಯ ಸಮಾಗಮವಾಗಿದೆ. ಭಿನ್ನ ಭಿನ್ನ ಆಚರಣೆಯ ಕಲಾ ರೂಪಕಗಳು, ನಾಡಿನ ಇತಿಹಾಸ ಸಾರುವ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೌಹಾರ್ದ ಪ್ರೇಮಿಗಳು ಆಗಮಿಸುವ ಮೂಲಕ ಯಶಸ್ವಿಗಳಿಸಿ ಕೊಡಬೇಕೆಂದು ಸಂಘಟನೆಯ ಕಾರ್ಯದರ್ಶಿ, ವಕೀಲ ಕೆ.ಪಿ.ಶ್ರೀಪಾಲ್ ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು ಸಮಾವೇಶಕ್ಕೆ ಶಿವಮೊಗ್ಗ ನಗರ ಹಾಗೂ ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ಸೌಹಾರ್ದ ಪ್ರೇಮಿಗಳು ತೆರಳುತ್ತಿದ್ದೆವೆ. ಅಗತ್ಯ ವಾಹನಗಳ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಸಮಾವೇಶಕ್ಕೆ ಆಗಮಿಸುವವರು ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂದು ಸಂಘಟನೆಯ ಸದಸ್ಯ ಕುಮಾರ್‍ರವರು ತಿಳಿಸಿದ್ದಾರೆ.