×
Ad

ಮಂಡ್ಯ : ಸರಿ ಮಾಹಿತಿ ನೀಡದ ಅಧಿಕಾರಿಗಳಿಗೆ ಸಚಿವ ಕೃಷ್ಣಪ್ಪ ತರಾಟೆ

Update: 2017-12-19 22:53 IST

ಮಂಡ್ಯ, ಡಿ.19: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ತರಾಟೆಗೆ ತೆಗೆದುಕೊಂಡರು.

ಪ್ರತಿ ತಾಲೂಕಿನಲ್ಲಿ ಕನಿಷ್ಠ ಇಬ್ಬರು ರೈತರಿಗೆ ಸಾವಯವ ಕೃಷಿ ಬಗ್ಗೆ ತರಬೇತಿ ನೀಡುವಂತೆ ಸೂಚಿಸಿದ್ದನ್ನು ಅನುಷ್ಠಾನಕ್ಕೆ ತರಲಾಗಿದೆಯೇ ಎಂಬ ಪ್ರಶ್ನೆಗೆ ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚಾನ ಸಮರ್ಪಕ ಮಾಹಿತಿ ನೀಡಲಿಲ್ಲ.

ಇದರಿಂದ ಸಿಟ್ಟಿಗೆದ್ದ ಸಚಿವರು, ಮಳವಳ್ಳಿ ತಾಲೂಕಿನ ರೈತರೊಬ್ಬರು ಸಾವಯವ ಕೃಷಿಯಲ್ಲಿ ಮಾದರಿಯಾಗಿದ್ದು, ಅಂತೆಯೇ ತಾಲೂಕಿನ ಕನಿಷ್ಠ ಇಬ್ಬರು ರೈತರಿಗೆ ತರಬೇತುಗೊಳಿಸಲು ಸೂಚಿಸಿದ್ದನ್ನು ಅನುಷ್ಠಾನಗೊಳಿಸಿಲ್ಲವೇಕೆ ಪ್ರಶ್ನಿಸಿದರು.

ಎಲ್ಲಾ ತಾಲೂಕಿನಲ್ಲಿ ತಮ್ಮ ಸೂಚನೆ ಮೇರೆಗೆ ರೈತರಿಗೆ ತರಬೇತು ನೀಡಲಾಗುತ್ತಿದೆ ಎಂಬುದಾಗಿ ಸುಲೋಚನಾ ವಿವರಿಸುತ್ತಿದ್ದಂತೆ, ಡಿ.ಸಿ.ತಮ್ಮಣ್ಣ ಸೇರಿದಂತೆ ಹಲವು ಶಾಸಕರು ಅಧಿಕಾರಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ಆಕ್ಷೇಪಿಸಿದರು.

ಕಡತದಲ್ಲಿರುವ ಮಾಹಿತಿ ಬೇಕಿಲ್ಲ. ನೀವು ಯಾವ ಯಾವ ಸ್ಥಳಕ್ಕೆ ಭೇಟಿ ನೀಡಿದ್ದೀರಿ, ರೈತರನ್ನು ಸಾವಯವ ಕೃಷಿಗೆ ತರಬೇತುಗೊಳಿಸಿದ್ದೀರಿ ಎಂಬ ಮಾಹಿತಿ ಬೇಕು. ಜವಾಬ್ಧಾರಿಯಿಂದ ಕೆಲಸ ಮಾಡಬೇಕು ಎಂದು ಸಚಿವರು ಅಧಿಕಾರಿಗೆ ಸೂಚಿಸಿದರು.

ಜಿಲ್ಲೆಗೆ 128 ಅಂಬೇಡ್ಕರ್ ಭವನ ಹಾಗೂ ಬಾಬು ಜಗಜೀವನ್‍ರಾಂ ಭವನ ನಿರ್ಮಾಣ ಮಂಜೂರಾಗಿದ್ದು, ಮಂಡ್ಯ ತಾಲೂಕಿನ ದೊಡ್ಡಕೊತ್ತಗೆರೆ, ಕಬ್ಬನಹಳ್ಳಿ ಪೂರ್ಣಗೊಂಡಿವೆ ಎಂದು ಸಮಾಜ ಕಲ್ಯಾಣಾಧಿಕಾರಿ ಮಾಲತಿ ಮಾಹಿತಿ ನೀಡಿದರು.

ಮಾಲತಿ ಅವರು ನೀಡಿರುವ ಮಾಹಿತಿಯೂ ತಪ್ಪು ಎಂಬುದಾಗಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಹಲವು ಕಾಮಗಾರಿಗಳು ಅಂತಿಮಹಂತಕ್ಕೆ ಬಂದಿದ್ದರೆ, ಕೆಲವು ಪ್ರಗತಿಯಲ್ಲಿವೆ. ಕಾಮಗಾರಿಯನ್ನು ಕೆಆರ್‍ಡಿಸಿಎಲ್‍ಗೆ ವಹಿಸಲಾಗಿದೆ ಎಂದು ಮಾಲತಿ ಹೇಳಿದರು.

ಕೆಆರ್‍ಡಿಸಿಎಲ್‍ಗೆ ವಹಿಸಿರುವ ಪ್ರತಿಯೊಂದು ಕಾಮಗಾರಿಗಳೂ ವಿಳಂಬವಾಗುತ್ತಿದ್ದು, ಬೇರೆಯವರಿಗೆ ವಹಿಸುವುದು ಸೂಕ್ತವೆಂದು ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಸಚಿವ ಎಂ.ಕೃಷ್ಣಪ್ಪ, ಈ ಸಂಬಂಧ ಚರ್ಚಿಸಿ ತೀರ್ಮಾನ ಮಾಡೋಣವೆಂದರು.

ಶ್ರೀರಂಗಪಟ್ಟಣದ ಅಂಬೇಡ್ಕರ್ ಭವನ ಕಾಮಗಾರಿ ವಿಳಂಬವಾಗಿರುವುದಕ್ಕೆ ಕೆಆರ್‍ಡಿಸಿಎಲ್ ಅಧಿಕಾರಿಯನ್ನು ಅಲ್ಲಿನ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ತರಾಗೆ ತೆಗೆದುಕೊಂಡರು. ನಿಮ್ಮಿಂದ ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷತೆ  ಜೆ.ಪ್ರೇಮಕುಮಾರಿ, ಉಪಾಧ್ಯಕ್ಷೆ ಗಾಯತ್ರಿ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಿಪಂ ಸಿಇಓ ಬಿ.ಶರತ್, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News