×
Ad

‘ದಾವಣಗೆರೆ, ಚಿತ್ರದುರ್ಗ ಬೇರ್ಪಡಿಸುವ ಪ್ರಸ್ತಾಪ ರದ್ದು’

Update: 2017-12-19 23:17 IST

ಶಿವಮೊಗ್ಗ, ಡಿ.19: ಶಿವಮೊಗ್ಗ ಹಾಲು ಒಕ್ಕೂಟದಿಂದ ದಾವಣಗೆರೆ ಮತ್ತು ಚಿತ್ರದುರ್ಗವನ್ನು ಬೇರ್ಪಡಿಸುವ ಪ್ರಸ್ತಾಪವನ್ನು ಕೈಬಿಡಲಾಗಿದೆ ಎಂದು ಒಕ್ಕೂಟದ ನೂತನ ಅಧ್ಯಕ್ಷ ಎಚ್.ಎನ್. ವಿದ್ಯಾಧರ ತಿಳಿಸಿದ್ದಾರೆ.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಶಿವಮೊಗ್ಗ ಹಾಲು ಒಕ್ಕೂಟದಿಂದ ಸುಮಾರು 150ಕೋಟಿ ರೂ. ವೆಚ್ಚದಲ್ಲಿ ದಾವಣಗೆರೆಯಲ್ಲಿ ಮೆಗಾ ಡೈರಿನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.
ಚಿತ್ರದುರ್ಗದಲ್ಲಿ ಇರುವ ಹಾಲಿ ಡೈರಿಯನ್ನು ನವೀಕರಣ ಮಾಡಲಾಗುವುದು. ಜೊತೆಗೆ ದಾವಣಗೆರೆ ಮತ್ತು ಚಿತ್ರದುರ್ಗುದಲ್ಲಿ ಖಾಸಗಿ ಹಾಲು ಕಂಪೆನಿಗಳ ಪೈಪೋಟಿ ಹೆಚ್ಚಿರುವುದರಿಂದ ನಂದಿನಿ ಹಾಲಿನ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

ಶಿವಮೊಗ್ಗ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದ ಹಾಲು ಉತ್ಪಾದನೆಯಾಗುತ್ತಿದೆ. ಇದರಿಂದ ಮಾರುಕಟ್ಟೆ ಸಮಸ್ಯೆ ಅಧಿಕವಾಗುತ್ತಿದೆ. ಒಕ್ಕೂಟದಲ್ಲಿ ಪ್ರತಿದಿನ 5.37 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದು, ಇದರಲ್ಲಿ ಸುಮಾರು 1.94ಲಕ್ಷ ಲೀಟರ್ ಮಾತ್ರ ಮಾರಾಟವಾಗುತ್ತಿದೆ. 30 ಲಕ್ಷ ಲೀಟರ್‌ನ್ನು ಅಂತರ್ ಡೈರಿಗೆ ಮಾರಾಟ ಮಾಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕ್ಷೀರಭಾಗ್ಯ ಯೋಜನೆಗೆ ಒಂದು ಲಕ್ಷ ಲೀಟರ್ ಹಾಲನ್ನು ಒದಗಿಸಲಾಗುತ್ತಿದೆ. ಶಿವಮೊಗ್ಗದಲ್ಲಿ 480, ದಾವಣಗೆರೆಯಲ್ಲಿ 358 ಮತ್ತು ಚಿತ್ರದುರ್ಗದಲ್ಲಿ 274 ಹಾಲು ಉತ್ಪಾದನಾ ಸಂಘಗಳಿದ್ದು, ಒಕ್ಕೂಟದಲ್ಲಿ ಒಟ್ಟು 7 ಶೀಥಲೀಕರಣ ಕೇಂದ್ರಗಳಿವೆ. ಇವುಗಳ ಮೂಲಕ ಹಾಲನ್ನು ಮಾರುಕಟ್ಟೆಗೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಡೈರಿಯಲ್ಲಿ 2 ಲಕ್ಷ ಲೀಟರ್ ಸಾಮರ್ಥ್ಯದ ಮಿಲ್ಕ್ ಪ್ಯಾಕಿಂಗ್ ಸ್ಟೇಷನ್ ನವೀಕರಣಗೊಳಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಎಚ್.ಸಿ. ನಾಗರಾಜಪ್ಪ, ನಿರ್ದೇಶಕ ಶ್ರೀಪಾದ ಹೆಗಡೆ, ದಾನೇಗೌಡ, ಚಂದ್ರಶೇಖರಪ್ಪ, ಷಣ್ಮುಖಪ್ಪ, ಎಚ್.ಕೆ. ಬಸಪ್ಪ, ಕೆ.ಎನ್. ಜಗದೀಶ್ವರ್, ಎಚ್.ಕೆ. ಫಾಲಾಕ್ಷಪ್ಪ, ಟಿ. ಶಿವಶಂಕರ್, ಎಂ.ಆರ್. ಮಹೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News