ಇವಿಎಂ ಮತಯಂತ್ರ ದುರ್ಬಳಕೆ: ಪ್ರಾಮಾಣಿಕ ಚರ್ಚೆ ನಡೆಯಲಿ

Update: 2017-12-20 05:37 GMT

ಗುಜರಾತ್ ಚುನಾವಣಾ ಫಲಿತಾಂಶಕ್ಕೆ ಮುನ್ನ ಮಾಧ್ಯಮಗಳಲ್ಲಿ ಪ್ರಕಟವಾದ ಸಮೀಕ್ಷೆಯನ್ನು ಕಂಡದ್ದೇ ಕಾಂಗ್ರೆಸ್ ಪಕ್ಷದ ಮುಖಂಡರು ‘ಇವಿಎಂ ಯಂತ್ರ ಹೈಜಾಕ್ ಆಗಿದೆ’ ಎಂದು ಆಯೋಗದ ಮುಂದೆ ದೂರಿಕೊಂಡರು. ಆ ಮೂಲಕ, ಅದು ಒಂದು ನಿರೀಕ್ಷಣಾ ಜಾಮೀನು ತೆಗೆದುಕೊಂಡಿತು. ಚುನಾವಣೆಯಲ್ಲಿ ಮುಖಭಂಗವಾದರೆ, ಇವಿಎಂನ್ನು ಮುಖಕ್ಕೆ ಕಟ್ಟಿಕೊಂಡು ಓಡಾಡುವ ತಂತ್ರದ ಭಾಗವಾಗಿತ್ತು ಅದು. ಆದರೆ ಫಲಿತಾಂಶ ಹೊರಬಂದ ಬೆನ್ನಿಗೇ ಸಮಾಧಾನದ ನಿಟ್ಟುಸಿರು ಬಿಟ್ಟಿರುವ ಕಾಂಗ್ರೆಸ್, ಇವಿಎಂ ಕುರಿತ ತನ್ನ ಆರೋಪದ ಬಗ್ಗೆ ವೌನ ತಾಳಿದೆ. ಇವಿಎಂ ಕುರಿತಂತೆ ಆರೋಪಗಳು ಕೇಳಿ ಬರುತ್ತಿರುವುದು ಇಂದು ನಿನ್ನೆಯಲ್ಲ.

ಭಾರತ ಪ್ರಕಾಶಿಸುತ್ತಿದೆ ಎಂಬ ಬಿಜೆಪಿಯ ಘೋಷಣೆ ವಿಫಲಗೊಂಡು ಯುಪಿಎ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಇವಿಎಂ ವಿರುದ್ಧ ಸ್ವತಃ ಅಡ್ವಾಣಿ ಅನುಮಾನ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ಇವಿಎಂನ್ನು ದುರುಪಯೋಗ ಪಡಿಸಬಹುದು ಎನ್ನುವುದನ್ನು ಅಧಿಕಾರಿಯೊಬ್ಬರು ಉದಾಹರಣೆ ಸಹಿತ ಮಾಧ್ಯಮಗಳಿಗೆ ವಿವರಿಸಿದ್ದರು. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭೂತಪೂರ್ವ ಜಯವನ್ನು ಗಳಿಸಿದಾಗಲೂ ಈ ಶಂಕೆ ಜೀವ ಪಡೆದಿತ್ತು. ಮೇಧಾಪಾಟ್ಕರ್ ಈ ಸಂದರ್ಭದಲ್ಲಿ ಒಂದು ದೂರನ್ನೂ ದಾಖಲಿಸಿದ್ದರು. ಆದರೆ ಪ್ರಮುಖ ರಾಜಕೀಯ ಪಕ್ಷಳು ಈ ಆರೋಪಗಳ ಕುರಿತಂತೆ ಗಂಬೀರವಾಗಿರಲಿಲ್ಲ. ಈ ಬಗ್ಗೆ ಚರ್ಚೆಯೊಂದು ನಡೆಯಬೇಕು ಮತ್ತು ಇವಿಎಂ ದುರ್ಬಳಕೆ ಸಾಧ್ಯವೇ ಎನ್ನುವುದನ್ನು ಅಧಿಕೃತ ತಜ್ಞರು ತನಿಖೆ ನಡೆಸಬೇಕು ಎಂದು ಬಯಸಲೇ ಇಲ್ಲ.

ಚುನಾವಣೆಯ ಫಲಿತಾಂಶದ ಸಮೀಕ್ಷೆಗಳು ತಮ್ಮ ಪರವಾಗಿಲ್ಲ ಎಂಬುವುದು ಗಮನಕ್ಕೆ ಬಂದಾಗಷ್ಟೇ ಇವರಿಗೆ ಇವಿಎಂ ನೆನಪಾಗುತ್ತದೆ. ಆಗ ‘ಇವಿಎಂನ್ನು ದುರ್ಬಳಕೆ ಮಾಡಲಾಗಿದೆ’ ಎಂದು ಗೋಳಾಡುತ್ತಾ ತಮ್ಮ ಮುಖ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇವಿಎಂನ್ನು ದುರ್ಬಳಕೆ ಮಾಡಲು ಸಾಧ್ಯ ಎಂದಾದರೆ ಚುನಾವಣೆಗೆ ಮುನ್ನವೇ ಅದರ ವಿರುದ್ಧ ಒಂದು ಆಂದೋಲನವನ್ನು ರೂಪಿಸುವುದು ವಿರೋಧ ಪಕ್ಷಗಳ ಕರ್ತವ್ಯವಲ್ಲವೇ? ಚುನಾವಣೆಯವರೆಗೂ ವೌನವಾಗಿದ್ದು, ಫಲಿತಾಂಶ ಪ್ರಕಟವಾಗುವ ಹೊತ್ತಿನಲ್ಲಿ ಇವಿಎಂನ್ನು ಗುರಾಣಿಯಾಗಿ ಬಳಸುವುದು ಎಷ್ಟು ಸರಿ? ಉತ್ತರ ಪ್ರದೇಶದಲ್ಲಿ ಮಾಯಾವತಿ ನೇತೃತ್ವದ ಬಿಎಸ್ಪಿಯ ಗೋಳಾಟವನ್ನೇ ತೆಗೆದುಕೊಳ್ಳೋಣ. ಮೋದಿಯ ಗೆಲುವಿನ ಹಿಂದೆ ಇವಿಎಂ ದುರ್ಬಳಕೆಯಾಗಿರಬಹುದು ಎಂದು ಹಲವು ಸಾಮಾಜಿಕ ಕಾರ್ಯಕರ್ತರು ಧ್ವನಿ ಎತ್ತಿದಾಗ ಇವರು ವೌನವಾಗಿದ್ದರು.

ಕನಿಷ್ಠ ಆ ಕುರಿತಂತೆ ಒಂದು ಪತ್ರಿಕಾಗೋಷ್ಠಿಯನ್ನೂ ಮಾಡಲಿಲ್ಲ. ಆದರೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಭಾರೀ ಮುಖಭಂಗವಾದ ಬೆನ್ನಿಗೇ ಇವಿಎಂನ್ನು ಎಲ್ಲಕ್ಕೂ ಹೊಣೆ ಮಾಡಿ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ದಲಿತರು ಮತ್ತು ಮುಸ್ಲಿಮರ ಮೇಲೆ ನಡೆದ ಸರಣಿ ದಾಳಿಗಳ ವಿರುದ್ಧ ಪ್ರಬಲ ಧ್ವನಿಯಾಗಬೇಕಾಗಿದ್ದ ಮಾಯಾವತಿ ಚುನಾವಣೆಯವರೆಗೂ ಆ ದೌರ್ಜನ್ಯಗಳ ಜೊತೆಗೆ ಅಂತರವನ್ನು ಕಾದುಕೊಂಡರು. ರೋಹಿತ್ ವೇಮುಲಾ ಆತ್ಮಹತ್ಯೆ, ಉನಾದಲ್ಲಿ ದಲಿತರ ಮೇಲೆ ದಾಳಿ, ಅಖ್ಲಾಕ್‌ರ ಬರ್ಬರ ಹತ್ಯೆ, ಗೋಮಾಂಸ ನಿಷೇಧ, ರಾಜಸ್ಥಾನ, ಹರ್ಯಾಣಗಳಲ್ಲಿ ಮುಸ್ಲಿಮರ ಮೇಲೆ ನಡೆದ ದಾಳಿ, ಉತ್ತರಪ್ರದೇಶದಲ್ಲಿ ನಡೆದ ಕೋಮುಗಲಭೆ, ಲವ್‌ ಜಿಹಾದ್ ಹೆಸರಲ್ಲಿ ಅಮಾಯಕ ಮುಸ್ಲಿಮರ ಮೇಲೆ ನಡೆದ ದಾಳಿ.... ಇವೆಲ್ಲವುಗಳನ್ನು ಬಳಸಿ ಪಕ್ಷಕ್ಕೆ ಪೂರಕವಾಗಿ ರಾಷ್ಟ್ರಮಟ್ಟದಲ್ಲಿ ಆಂದೋಲನವನ್ನು ರೂಪಿಸಬೇಕಾಗಿದ್ದ ಮಾಯಾವತಿ, ಸಾರ್ವಜನಿಕವಾಗಿ ಕಾಣಿಸಿಕೊಂಡಿರಲೇ ಇಲ್ಲ.

ಪರಿಣಾಮವಾಗಿ ಜಿಗ್ನೇಶ್, ಕನ್ನಯ್ಯ, ಅಲ್ಪೇಶ್, ಆಝಾದ್‌ರಂತಹ ಯುವಕರು ಹುಟ್ಟಿಕೊಂಡರು. ದೇಶಾದ್ಯಂತ ಆಂದಲೋನಗಳನ್ನು ರೂಪಿಸಿ ಜನಜಾಗೃತಿ ನಡೆಸಿದರು. ಮಾಯಾವತಿಯವರು ಚುನಾವಣೆಯ ಸಂದರ್ಭದಲ್ಲಿ ಬಹುಸಂಖ್ಯೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಟ್ಟು ತಮ್ಮ ಜಾತ್ಯತೀತತೆ ಸಾಬೀತು ಪಡಿಸಲು ಯತ್ನಿಸಿದರು. ಚುನಾವಣೆಯ ಫಲಿತಾಂಶ ಅವರಿಗೆ ಸರಿಯಾದ ಉತ್ತರವನ್ನೇ ನೀಡಿತ್ತು. ಇವಿಎಂ ದುರ್ಬಳಕೆ ಮಾಯಾವತಿಗೆ ನೆನಪಾಗಿದ್ದು ಆಗ. ಇಂದಿಗೂ ದೇಶದಲ್ಲಿ ದೊಡ್ಡ ಧ್ವನಿಯಲ್ಲಿ ಇವಿಎಂ ವಿರುದ್ಧ ಮಾತನಾಡುತ್ತಿರುವುದು ಬಿಎಸ್ಪಿ ಮಾತ್ರ. ಉಳಿದವರ ಧ್ವನಿಗಳು ಸಮಯ ಸಂದರ್ಭಕ್ಕನುಗುಣವಾಗಿ ಮಾತ್ರ ಹೊರಹೊಮ್ಮುತ್ತವೆ.

ಚುನಾವಣೆಯ ಸಂದರ್ಭದಲ್ಲಿ ಇವಿಎಂ ದುರ್ಬಳಕೆ ಆಗಿದೆ ಎನ್ನುವುದಕ್ಕೆ ಸ್ಪಷ್ಟವಾದ ದಾಖಲೆಗಳು ಈವರೆಗೆ ಸಿಕ್ಕಿಲ್ಲ. ಆದರೆ ಇವಿಎಂನ್ನು ದುರ್ಬಳಕೆ ಮಾಡಬಹುದು ಮತ್ತು ಹೊರಗಿನ ಶಕ್ತಿಗಳು ಅದನ್ನು ನಿಯಂತ್ರಿಸಬಹುದು ಎನ್ನುವುದನ್ನು ಮಾತ್ರ ಹಲವು ತಜ್ಞರು ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ, ಹಲವು ಮತಗಟ್ಟೆಗಳ ಮತಯಂತ್ರಗಳು ಬಿಜೆಪಿಗೆ ಮಾತ್ರ ಮತ ರವಾನಿಸುತ್ತಿರುವುದು ಪತ್ತೆಯಾಗಿ ಆಯೋಗವನ್ನು ಮುಜುಗರಕ್ಕೆ ತಳ್ಳಿತ್ತು.

ಇಂತಹ ಪ್ರಕರಣಗಳನ್ನು ಮುಂದಿಟ್ಟು ಎಲ್ಲ ಪಕ್ಷಗಳು ಜೊತೆಯಾಗಿ ಇವಿಎಂ ವಿರುದ್ಧ ಆಂದೋಲನವನ್ನು ನಡೆಸಿದ್ದೇ ಆಗಿದ್ದರೆ, ಚುನಾವಣಾ ಆಯೋಗವೂ ಇದರ ಬಗ್ಗೆ ಈಗಾಗಲೇ ಒಂದು ತೀರ್ಮಾನಕ್ಕೆ ಬಂದು ಬಿಡುತ್ತಿತ್ತು. ಕನಿಷ್ಠ ಮುಂದಿನ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಾದರೂ, ಮತಪತ್ರ ಬಳಕೆಯಾಗುವ ಸಾಧ್ಯತೆಗಳಿತ್ತು. ಬಹುಶಃ ಸೋತ ಹೊತ್ತಿನಲ್ಲಿ ಗುರಾಣಿಯಾಗಿ ಬಳಸಲು ಇರಲಿ ಎಂದು ಇವಿಎಂನ ಕುರಿತಂತೆ ಉಳಿದ ರಾಷ್ಟ್ರೀಯ ಪಕ್ಷಗಳು ಮೃದು ನಿಲುವು ತಳೆದಂತಿದೆ. ಒಂದಂತೂ ನಿಜ. ಇವಿಎಂ ದುರ್ಬಳಕೆಗೊಂಡ ಕಾರಣಕ್ಕಾಗಿ ಹಲವು ದೇಶಗಳು ಈ ಯಂತ್ರವನ್ನು ಕಸದ ಬುಟ್ಟಿಗೆ ಹಾಕಿ, ಮತ್ತೆ ಮತ ಪತ್ರಗಳ ಕಡೆಗೆ ಮರಳಿವೆ.

ಫ್ಲೋರಿಡಾ, ನೆದರ್‌ಲ್ಯಾಂಡ್, ಜರ್ಮನಿ, ಐರ್ಲ್ಯಾಂಡ್ ಅಂತಹ ದೇಶಗಳಲ್ಲಿ ಕೆಲವು. 2006ರಲ್ಲಿ ಡಚ್ ಟಿವಿ ಈ ಮತಯಂತ್ರವನ್ನು ದುರ್ಬಳಕೆ ಮಾಡುವುದು ಎಷ್ಟು ಸುಲಭ ಎನ್ನುವುದರ ಕುರಿತು ಒಂದು ಸಾಕ್ಷ ಚಿತ್ರವನ್ನೇ ನಿರ್ಮಾಣ ಮಾಡಿತ್ತು. ಭಾರತದ ಮಟ್ಟಿಗೆ ಮತಯಂತ್ರಗಳ ಕುರಿತಂತೆ ಅನುಮಾನಗಳು ಏಳುವುದಕ್ಕೆ ಹಲವು ಕಾರಣಗಳಿವೆ. ಇತ್ತೀಚೆಗೆ, ಅನಿಲ ಹಗರಣದ ಹಿಂದೆ ಇರುವ ಪ್ರಮುಖರು ಮತ್ತು ಇವಿಎಂ ಚಿಪ್ ಉತ್ಪಾದನಾ ಕಂಪೆನಿಯ ಮಾಲಕರ ನಡುವಿನ ನಂಟನ್ನು ಜನತಾ ಕಾ ರಿಪೋರ್ಟರ್ ಹೊರಗೆಡಹಿತ್ತು. ಗುಜರಾತ್‌ನ ಅನಿಲ ಹಗರಣದ ಫಲಾನುಭವಿಗಳಿಗೂ ಈ ಚಿಪ್ ತಯಾರಕರಿಗೂ ಸಂಬಂಧವಿದೆ ಎಂದು ಇದು ಹೇಳಿತ್ತು. ಕನಿಷ್ಠ ಈ ಆರೋಪವನ್ನಾದರೂ ಚುನಾವಣಾ ಆಯೋಗ ಗಂಭಿರವಾಗಿ ತೆಗೆದುಕೊಳ್ಳಬೇಕಾಗಿತ್ತು. ಆದರೆ ಈ ಕುರಿತಂತೆ ಯಾವ ಸ್ಪಷ್ಟೀಕರಣವನ್ನೂ ಆಯೋಗವು ಈವರೆಗೆ ನೀಡಿಲ್ಲ. ಬಹುಶಃ ಆಯೋಗ ಸ್ಪಷ್ಟೀಕರಣ ನೀಡಲೇಬೇಕಾದಂತಹ ಒತ್ತಡವನ್ನು ಸೃಷ್ಟಿಸುವಲ್ಲಿ ಎಲ್ಲ ರಾಜಕೀಯ ಪಕ್ಷಗಳು ವಿಫಲವಾಗಿರುವುದು ಇದಕ್ಕೆ ಕಾರಣವಾಗಿರಬಹುದು. ಪ್ರಜಾಸತ್ತೆಯ ಅಡಿಗಲ್ಲು ಚುನಾವಣೆ.

ಆ ಚುನಾವಣಾ ಪ್ರಕ್ರಿಯೆಯೇ ಅನುಮಾನಕ್ಕೆ ಒಳಗಾದರೆ ಮತ್ತೇನು ಉಳಿಯುತ್ತದೆ? ಆದುದರಿಂದ ಚುನಾವಣಾ ಆಯೋಗ ಇವಿಎಂನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಇದೇ ಸಂದರ್ಭದಲ್ಲಿ ಚುನಾವಣಾ ಫಲಿತಾಂಶದ ಹೊತ್ತಿನಲ್ಲಷ್ಟೇ ಇವಿಎಂನ್ನು ಗುರಾಣಿ ಮಾಡುವ ಪಕ್ಷಗಳು ತಕ್ಷಣ ಒಂದಾಗಿ ಆಯೋಗಕ್ಕೆ ಒತ್ತಡ ಹೇರಿ ಇವಿಎಂ ವಿಶ್ವಾಸಾರ್ಹತೆಯನ್ನು ಸ್ಪಷ್ಟ ಪಡಿಸಿಕೊಳ್ಳಬೇಕು. ಸೂಕ್ತ ತಜ್ಞರನ್ನು ಮುಂದಿಟ್ಟು, ಎಷ್ಟರಮಟ್ಟಿಗೆ ಯಂತ್ರವನ್ನು ಹ್ಯಾಕ್ ಮಾಡಬಹುದು ಎನ್ನುವುದರ ಕುರಿತಂತೆ ಚರ್ಚೆ ನಡೆಸಬೇಕು. ರಾಜಕಾರಣಿಗಳು ಈ ಕುರಿತಂತೆ ಬರೇ ಪತ್ರಿಕಾ ಹೇಳಿಕೆಗಳಿಗೆ ಸೀಮಿತವಾಗಿ ಉಳಿಯದೆ, ಪ್ರಾಯೋಗಿಕವಾಗಿ ತಮ್ಮ ಆರೋಪಗಳಿಗೆ ಕಾರಣವಾಗುವ ಅಂಶಗಳನ್ನು ಆಯೋಗದ ಮುಂದಿಡಬೇಕು. ಆಗ ಆಯೋಗಕ್ಕೂ ಈ ಕುರಿತಂತೆ ಒಂದು ಸ್ಪಷ್ಟ ನಿಲುವಿಗೆ ಬರುವುದು ಅನಿವಾರ್ಯವಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆಯ ತಯಾರಿ ಇವಿಎಂ ವಿರುದ್ಧದ ಹೋರಾಟದ ಜೊತೆಗೇ ಆರಂಭವಾಗಲಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News