ಬೆಂಬಲ ಬೆಲೆಯಲ್ಲಿ ಸರಕಾರದಿಂದ ತೊಗರಿ, ಶೇಂಗಾ, ರಾಗಿ ಖರೀದಿ: ಸಚಿವ ಟಿ.ಬಿ.ಜಯಚಂದ್ರ

Update: 2017-12-20 14:52 GMT

ತುಮಕೂರು, ಡಿ. 20: ರಾಜ್ಯ ಸರಕಾರ, ಕೇಂದ್ರ ಸರಕಾರದ ಸಹಯೋಗದೊಂದಿಗೆ ನ್ಯಾಪೇಡ್ ಖರೀದಿ ಕೇಂದ್ರಗಳ ಮೂಲಕ ಕ್ವಿಂಟಾಲ್‍ಗೆ 6,000 ರೂ ನಂತೆ ತೊಗರಿ, 4,450 ರೂ ನಂತೆ ಶೇಂಗಾ ಮತ್ತು 2,300 ರೂ ನಂತೆ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಕೊಳ್ಳುವ ಪ್ರಕ್ರಿಯೆಯನ್ನು ಇಂದಿನಿಂದ ಆರಂಭಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಈ ಬಾರಿಯ ಹಿಂಗಾರಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ನಿರೀಕ್ಷೆಗೂ ಮೀರಿದ ಇಳುವರಿ ಬಂದಿದ್ದು, ನಿರೀಕ್ಷೆಯಂತೆ ಬೆಲೆ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ 5450 ರೂ ಬೆಂಬಲ ಬೆಲೆಯ ಜೊತೆಗೆ,ರಾಜ್ಯ ಸರಕಾರ 550 ರೂ ಪ್ರೋತ್ಸಾಹ ಧನದೊಂದಿಗೆ ಕ್ವಿಂಟಾಲ್‍ಗೆ 6000 ರೂಗಳಲ್ಲಿ  ಕೊಳ್ಳಲು ತೀರ್ಮಾನಿಸಿದ್ದು, ಮುಂದಿನ 60 ದಿನಗಳ ಕಾಲ ರಾಜ್ಯದಲ್ಲಿ ಎಲ್ಲೆಲ್ಲಿ ಬೇಡಿಕೆ ಇದೆಯೋ ಅಲ್ಲಲ್ಲಿ ಮಾರಾಟ ಕೇಂದ್ರಗಳನ್ನು ತೆರೆದು ಕೊಳ್ಳಲಾಗುವುದು. 2017-18ರಲ್ಲಿ 8.85 ಲಕ್ಷ ಮೆ.ಟ. ತೊಗರಿ ಉತ್ಪಾಧನೆಯಾಗಿದ್ದು, ರಾಜ್ಯದ ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಈ ಬಾರಿ ಉತ್ತಮ ಫಸಲು ಬಂದಿದ್ದು, ಒಬ್ಬ ರೈತರಿಗೆ 20 ಕ್ವಿಂಟಾಲ್ ನಂತೆ, 16.57 ಲಕ್ಷ ಮೆ.ಟನ್ ತೊಗರಿಯನ್ನು ಕೊಳ್ಳಲು ತೀರ್ಮಾನಿಸಲಾಗಿದೆ. ಇಂದಿನಿಂದ 30 ದಿನಗಳ ಕಾಲ ರೈತರ ನೊಂದಣಿ ನಡೆಯಲಿದೆ. ನಂತರ 30 ದಿನ ರೈತರಿಂದ ಕೊಳ್ಳುವ ಪ್ರಕ್ರಿಯೆ ನಡೆಯಲಿದೆ ಎಂದರು.

ರಾಜ್ಯದಲ್ಲಿ ಅದರಲ್ಲಿಯೂ ತುಮಕೂರು, ಚಿತ್ರದುರ್ಗ, ಬಳ್ಳಾರಿ, ಗದಗ್, ಬಾಗಲಕೋಟೆ, ದಾವಣೆಗೆರೆ ಭಾಗದಲ್ಲಿ ಉತ್ತಮ ಮಳೆಯಾಗಿ ಶೇಂಗಾ ಉತ್ಪಾಧನೆಯಾಗಿದೆ. ಈ ಬಾರಿ 2.4 ಲಕ್ಷ ಮೆ.ಟ. ಶೇಂಗಾ ಉತ್ಪಾಧನೆ ನಿರೀಕ್ಷೆಯಿದ್ದು, ಸಂಪೂರ್ಣ ವಾಗಿ ಕೇಂದ್ರ ಸರಕಾರದ 4450ರೂಗಳಲ್ಲಿ ಒಂದು ಕ್ವಿಂಟಾಲ್‍ನಂತೆ ಕರ್ನಾಟಕ ಎಣ್ಣೆ ಬೀಜ ಅಭಿವೃದ್ದಿ ನಿಗಮದ ಮೂಲಕ ಕೊಳ್ಳಲು ವ್ಯವಸ್ಥೆ ಮಾಡಿದೆ. ಇದಕ್ಕೂ ಸಹ 60 ದಿನಗಳ ಕಾಲಾವಕಾಶವಿದ್ದು, ಮೊದಲ 15 ದಿನ ನೊಂದಣಿ ಮತ್ತು ಆ ನಂತರ ಖರೀದಿ ಆರಂಭವಾಗಲಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಕಿರು ಧಾನ್ಯಗಳಲ್ಲಿಯೇ ಎತ್ತೇಚ್ಚವಾಗಿ ಬೆಳೆಯುವ ರಾಗಿಯ ಉತ್ಪಾಧನೆ ಈ ವರ್ಷ ಹೆಚ್ಚಿದ್ದು, ತುಮಕೂರು, ಹಾಸನ, ಮಂಡ್ಯ, ಮೈಸೂರು ಸ್ಭೆರಿದಂತೆ ಹಳೆ ಮೈಸೂರು ಭಾಗದಲ್ಲಿ ರಾಗಿ ಬೆಳೆ ಸೋಗಸಾಗಿದೆ.ಕೇಂದ್ರದ 1900 ರೂ ಬೆಂಬಲ ಬೆಲೆಯ ಜೊತೆಗೆ, ರಾಜ್ಯ ಸರಕಾರ 400 ರೂ ಪ್ರೋತ್ಸಾಹ ಧನ ಸೇರಿ 2300 ರೂಗೆ ಒಂದು ಕ್ವಿಂಟಾಲ್ ನಂತೆ ರಾಗಿಯನ್ನು ಖರೀದಿಸಲಾಗುವುದು. ಇದಕ್ಕಾಗಿ 1000 ಕೋಟಿ ರೂ ತೆಗೆದಿರಿಸಲಾಗಿದೆ ಎಂದರು.

ಕೆಂದ್ರದಿಂದ ತಾರತಮ್ಯ: ಕಳೆದ ನಾಲ್ಕುವರ್ಷಗಳಲ್ಲಿ ರಾಜ್ಯ ಸರಕಾರ ಕೇಂದ್ರ ಸರಕಾರದ ಸಹಯೋಗದೊಂದಿಗೆ ಸುಮಾರು 1347 ಕೋಟಿರೂಗಳ ಅವರ್ತನಿಧಿಯನ್ನು ಖರ್ಚು ಮಾಡಿ, ರೈತರು ಬೆಳೆಗಳ ಬೆಲೆ ಕುಸಿಯದಂತೆ ಮಾರುಕಟ್ಟೆ ಪ್ರವೇಶ ಮಾಡಿ, ವಿವಿಧ ಕೃಷಿ ಉತ್ಪನ್ನಗಳನ್ನು ಖರೀದಿಸಿದೆ.ಆದರೆ ಇದುವರೆಗೂ ಕೇಂದ್ರ ಸರಕಾರ ಒಂದು ನೈಯಾ ಪೈಸವನ್ನು ರಾಜ್ಯಕ್ಕೆ ನೀಡಿಲ್ಲ. ಸ್ವತಹಃ ಮುಖ್ಯಮಂತ್ರಿಗಳು,ಕೃಷಿ ಮತ್ತು ಆಹಾರ ಮಂತ್ರಿಗಳು ಪ್ರಧಾನ ಮಂತ್ರಿ ಹಾಗೂ ಕೇಂದ್ರದ ಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದರೂ ಹಣ ಬಿಡುಗಡೆ ಮಾಡದೆ ತಾರತಮ್ಯ ಅನುಸರಿಸಲಾಗುತ್ತಿದೆ ಎಂದು ಸಚಿವ ಜಯಚಂದ್ರ ಆರೋಪಿಸಿದರು.

ಡಿ.28ಕ್ಕೆ ಸಿ.ಎಂ.ಶಿರಾಕ್ಕೆ:ಇದೇ ಡಿಸೆಂಬರ್ 28 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 236 ಕೋಟಿ ರೂಗಳ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು 868 ಕೋಟಿ ರೂಗಳ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆಗಾಗಿ ಶಿರಾಕ್ಕೆ ಬರುತ್ತಿದ್ದಾರೆ.

ನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ,ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ 17ಕ್ಕೂ ಅಧಿಕ ಸಚಿವರು ಭಾಗವಹಿಸುತ್ತಿದ್ದು,ಸಣ್ಣ ನೀರಾವರಿ, ಲೋಕೋಪಯೋಗಿ, ಪ್ರಧಾನ ಮಂತ್ರಿ ಗ್ರಾಮ ಸಡಕ್, ಹಿಂದುಳಿದವರ್ಗ, ಸಮಾಜ ಕಲ್ಯಾಣ, ತಾಂತ್ರಿಕ ಶಿಕ್ಷಣ, ಕೃಷಿ ಉತ್ಪನ್ನ, ನಿರ್ಮಿತಿ ಕೇಂದ್ರ, ನಗರಾಭಿವೃದ್ದಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಕೆ.ಆರ್.ಐ.ಡಿ ಎಲ್, ಪೊಲೀಸ್ ಇಲಾಖೆಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಯಲಿದೆ. ಇದೊಂದು ಸರಕಾರಿ ಕಾರ್ಯಕ್ರಮವಾಗಿದ್ದು, ಶಂಕುಸ್ಥಾಪನೆಗೊಳ್ಳುತ್ತಿರುವ ಎಲ್ಲಾ ಕಾಮಗಾರಿಗಳಿಗೂ ಈಗಾಗಲೇ ಆಡಳಿತಾತ್ಮಕ ಮಂಜೂರಾತಿ ದೊರೆತು,ಹಣ ಸಹ ಬಿಡುಗಡೆಯಾಗಿದೆ ಎಂದು ಸಚಿವ ಜಯಚಂದ್ರ ಸ್ಪಷ್ಟ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News