ದಲಿತ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರಗೈದು, ಕೊಲೆಗೈದ ದುಷ್ಕರ್ಮಿಗಳು
ವಿಜಯಪುರ, ಡಿ. 20: ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸುಮಾರು 7 ಮಂದಿ ಯುವಕರ ಗುಂಪು ಸಾಮೂಹಿಕ ಅತ್ಯಾಚಾರವೆಸಗಿ, ಭೀಕರವಾಗಿ ಹತ್ಯೆಗೈದ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ, ಬಾಲಕಿಯ ಮೃತದೇಹವಿಟ್ಟು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ ಘಟನೆ ವರದಿಯಾಗಿದೆ.
ಡಿ.19ರ ಮಧ್ಯಾಹ್ನ 12 ಗಂಟೆಯಿಂದ 1.30ರ ನಡುವೆ ಇಲ್ಲಿನ ಮಲ್ಲಿಕಾರ್ಜುನ ಹೈಸ್ಕೂಲ್‌ನ ಒಂಭತ್ತನೆ ತರಗತಿಯ ವಿದ್ಯಾರ್ಥಿನಿ ದಾನೇಶ್ವರಿ (14) ಎಂಬ ಬಾಲಕಿಯನ್ನು ಬೈಕ್‌ಗಳಲ್ಲಿ ಬಂದ ಯುವಕರ ಗುಂಪು ಅಪಹರಿಸಿದ್ದು, ಮಂಜುನಾಥ ಕಾಲನಿಯಲ್ಲಿನ ಮನೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದೆ ಎಂದು ಹೇಳಲಾಗಿದೆ.
ಅನಂತರ ದುಷ್ಕರ್ಮಿಗಳು ಅಪ್ರಾಪ್ತ ಬಾಲಕಿಯನ್ನು ಸಮೀಪದಲ್ಲಿರುವ ಕಟ್ಟೆಯೊಂದರ ಬಳಿ ಎಸೆದು ಪರಾರಿಯಾಗಿದ್ದಾರೆ. ನಿತ್ರಾಣ ಸ್ಥಿತಿಯಲ್ಲಿದ್ದ ಬಾಲಕಿ ಯನ್ನು ಸ್ಥಳೀಯರು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಈ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಬಾಲಕಿಯ ಪೋಷಕರು ಹಾಗೂ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸುವ ವೇಳೆಗಾಗಲೇ ಸಾರ್ವಜನಿಕರು ಕೆಲ ಶಂಕಿತ ಆರೋಪಿಗಳನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ, ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ, ಗಲ್ಲು ಶಿಕ್ಷೆ ವಿಧಿಸಬೇಕು. ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಶಾಲಾ ಮುಖ್ಯಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಧರಣಿ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬಾಲಕಿಯ ಕುಟುಂಬದ ಸದಸ್ಯರೊಂದಿಗೆ ವಿವಿಧ ದಲಿತ ಸಂಘಟನೆಗಳ ನೂರಾರು ಕಾರ್ಯಕರ್ತರು ಬಾಲಕಿಯ ಮೃತದೇಹವಿಟ್ಟು ಮಂಗಳವಾರ ತಡರಾತ್ರಿಯಿಂದ ಅಂಬೇಡ್ಕರ್ ವೃತ್ತದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಬೇಕೆಂದು ಆಗ್ರಹಿಸಿದರು.
ಬುಧವಾರ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಆರೋಪಿಗಳನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ಕೊಡಿಸಲು ಕ್ರಮ ವಹಿಸಲಾಗುವುದು. ಅಲ್ಲದೆ, ಮೃತ ಬಾಲಕಿಯ ಕುಟುಂಬಕ್ಕೆ ತಾನು ವೈಯಕ್ತಿಕವಾಗಿ 5 ಲಕ್ಷ ರೂ. ಹಾಗೂ ರಾಜ್ಯ ಸರಕಾರದಿಂದ 8 ಲಕ್ಷ ರೂ. ಪರಿಹಾರ ನೀಡುವ ಭರವಸೆಯ ಹಿನ್ನೆಲೆಯಲ್ಲಿ ಬಾಲಕಿಯ ಪೋಷಕರು ಪ್ರತಿಭಟನೆ ಕೈಬಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಕಿಡಿ: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಗೈದ ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂಬ ಆಗ್ರಹವೂ ವ್ಯಾಪಕವಾಗಿ ಕೇಳಿಬಂದಿದೆ. ವಿದ್ಯಾರ್ಥಿನಿ ಹತ್ಯೆ ಖಂಡಿಸಿ, ನೂರಾರು ಜನರು ತಮ್ಮ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದು, ವಾಟ್ಸಾಪ್‌ಗಳಲ್ಲಿ ಸಂದೇಶ ರವಾನಿಸುತ್ತಿದ್ದು, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆಯ ಬಗ್ಗೆ ರಾಜಕೀಯ ಪಕ್ಷಗಳ ಮೌನವೇಕೆ ಎಂಬ ಪ್ರಶ್ನೆಗಳು ವ್ಯಕ್ತವಾಗಿವೆ.
ಈ ಪ್ರಕರಣ ಸಂಬಂಧ ಇಲ್ಲಿನ ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿದ್ದು, ಪ್ರಕರಣ ಸಂಬಂಧ ನಾಲ್ಕೈದು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ದೀಪಕ್ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪಿಎಸ್ಸೈ ಪಾಟೀಲ್ 'ವಾರ್ತಾಭಾರತಿ' ಪತ್ರಿಕೆಗೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಎಸ್ಪಿ ಕುಲದೀಪ ಕುಮಾರ ಜೈನ್, ಹೆಚ್ಚುವರಿ ಎಸ್ಪಿ ಡಾ.ಶಿವಕುಮಾರ ಗುಣಾರೆ, ಡಿವೈಎಸ್ಪಿ ಅಶೋಕ, ಗೋಲಗುಂಬಜ, ಸಿಪಿಐ ಸುನಿಲ ಕಾಂಬಳೆ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಘಟನೆ ಅತ್ಯಂತ ಖಂಡನೀಯ, ಶೀಘ್ರದಲ್ಲೆ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಲಾಗುವುದು. ಇದು ಮಾನವೀಯತೆಗೆ ವಿರುದ್ಧ, ಆರೋಪಿಗಳು ಯಾರೇ ಆಗಿದ್ದರೂ ಬಿಡುವುದಿಲ್ಲ. ರಾಜ್ಯ ಸರಕಾರ ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’
-ಸಿದ್ದರಾಮಯ್ಯ ಮುಖ್ಯಮಂತ್ರಿ
‘ದಲಿತ ಬಾಲಕಿಯ ಮೇಲಿನ ಅತ್ಯಾಚಾರ ಕೃತ್ಯ ಅಮಾನವೀಯ, ನಾಚಿಕೆಗೇಡಿನ ಸಂಗತಿ, ಆಕೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಪೊಲೀಸರು ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲದು’
-ಯಮುನಪ್ಪ ಸಿದ್ದರೆಡ್ಡಿ ದಲಿತ ಮುಖಂಡ
‘ಬಾಲಕಿಯ ಮೇಲೆ ಅತ್ಯಾಚಾರ, ಕೊಲೆಗೈದ ಆರೋಪಿಗಳನ್ನು ಶೀಘ್ರವೇ ಬಂಧಿಸಲು ಸ್ಥಳೀಯ ಪೊಲೀಸರಿಗೆ ಸೂಚಿಸಲಾಗಿದೆ. ಆಕೆಯ ಕುಟುಂಬಕ್ಕೆ ತಾನು 5ಲಕ್ಷ ರೂ. ವೈಯಕ್ತಿಕ ಪರಿಹಾರ ನೀಡುವುದಲ್ಲದೆ, ಸರಕಾರದಿಂದ 8ಲಕ್ಷ ರೂ. ಪರಿಹಾರ ಕೊಡಿಸಲು ಕ್ರಮ ವಹಿಸುವೆ.'
-ಎಂ.ಬಿ.ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವ