ದಾನಮ್ಮ ಶಾಪೂರ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ
ಮಂಡ್ಯ, ಡಿ. 20: ವಿಜಯಪುರ ನಗರದಲ್ಲಿ ಹಾಡುಹಗಲೇ 9ನೇ ತರಗತಿಯ ದಾನಮ್ಮ ಶಾಪೂರ ಎಂಬ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿ ಸಂಘಟನೆಯ ಸದಸ್ಯರು ಬುಧವಾರ ಸಂಜೆ ಮೊಂಬತ್ತಿ ಹಚ್ಚಿ ಪ್ರತಿಭಟಿಸಿದರು.
ಈ ಪ್ರಕರಣವು ರಾಜ್ಯದ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಇತ್ತೀಚೆಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಇಂತಹ ಕ್ರೂರವಾದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಆದರೆ. ಸರಕಾರ ಮತ್ತು ನಾಗರಿಕ ಸಮಾಜ ಪರಿಣಾಮಕಾರಿಯಾದ ಉತ್ತರ ಹುಡುಕುವಲ್ಲಿ ವಿಫಲರಾಗಿದ್ದೇವೆ ಎಂದು ಅವರು ವಿಷಾದಿಸಿದರು.
ಇದರ ಪರಿಣಾವಾಗಿ ದಾನಮ್ಮಳಂತಹ ಅಮಾಯಕ ಬಾಲಕಿಯರು ದುಷ್ಟರ, ಪುಂಡರ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲೂ, ಸಾಕಷ್ಟು ಜನಸಂಚಾರವಿರುವ ಪ್ರದೇಶದಲ್ಲಿ, ಹಾಡುಹಗಲಿನಲ್ಲಿ ನಡೆದಿರುವ ಈ ಘಟನೆಯಂತೂ ನಿಜಕ್ಕೂ ನಮ್ಮೆಲ್ಲರಿಗೂ ಆಘಾತವನ್ನುಂಟುಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದಾನಮ್ಮಳ ಪ್ರಕರಣದಲ್ಲಿ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಎಲ್ಲರನ್ನೂ ಬಂಧಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ ಶಿಕ್ಷೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ನಾಗೇಶ್, ಪವಿತ್ರ, ಸೋಮಶೇಖರ್‍ಚಲ್ಯ, ಸಂತೋಷ್, ಇತರರು ಪಾಲ್ಗೊಂಡಿದ್ದರು.