ಶಾರುಖ್ ಖಾನ್ ದಾರಿ ಬಿಡಿ... ವಿರಾಟ್ ಕೊಹ್ಲಿ ಬರುತ್ತಿದ್ದಾರೆ !

Update: 2017-12-21 05:37 GMT

ಮುಂಬೈ,ಡಿ.21 : ಭಾರತದ ಟಾಪ್ ಸೆಲೆಬ್ರಿಟಿ ಬ್ರ್ಯಾಂಡ್ ಆಗಿ ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ  ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ. ಕಳೆದ ವರ್ಷಕ್ಕಿಂತ  ಶೇ. 56ರಷ್ಟು  ಏರಿಕೆ ಕಂಡಿರುವ ವಿರಾಟ್  ಅವರ ಬ್ರ್ಯಾಂಡ್ ಮೌಲ್ಯ ಇದೀಗ 144 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

ಬ್ರ್ಯಾಂಡ್ ಪ್ರಮೋಶನ್ ಶುಲ್ಕದ ಏರಿಕೆ, ಕ್ರಿಕೆಟ್ ರಂಗದ ಸಾಧನೆ ಮತ್ತು ಜನಪ್ರಿಯತೆಯ ಮಟ್ಟದ ಏರಿಕೆಯಿಂದ ಇದು ಸಾಧ್ಯವಾಗಿದೆ ಎಂದು   ಡಫ್ ಎಂಡ್ ಫೆಲ್ಪ್ಸ್ ‘ರೈಸ್ ಆಫ್ ದಿ ಮಿಲಿನ್ನಿಯಲ್ಸ್ : ಇಂಡಿಯಾಸ್ ಮೋಸ್ಟ್ ವಾಂಟೆಡ್ ಸೆಲೆಬ್ರಿಟಿ ಬ್ರ್ಯಾಂಡ್ಸ್' ವರದಿ ತಿಳಿಸುತ್ತದೆ.

“ಮೊದಲ ಸ್ಥಾನದಲ್ಲಿದ್ದ ಶಾರುಖ್ ಖಾನ್ ಅವರ ಸ್ಥಾನಕ್ಕೆ ವಿರಾಟ್ ಕೊಹ್ಲಿ ಬಂದಿದ್ದಾರೆ. ದೊಡ್ಡ ಬ್ರ್ಯಾಂಡುಗಳಿಗೆ  ಗ್ರಾಹಕರನ್ನು ಸೆಳೆಯಲು ತಮ್ಮ ಜಾಹೀರಾತುಗಳಿಗೆ ಕೊಹ್ಲಿ ಪ್ರಥಮ ಆಯ್ಕೆ ಆಗಿದ್ದಾರೆ,'' ಎಂದು ಡಫ್ ಎಂಡ್ ಫೆಲ್ಪ್ಸ್ ಆಡಳಿತ ನಿರ್ದೇಶಕ ವರುಣ್ ಗುಪ್ತಾ ಹೇಳಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದಾಗ ಶಾರುಖ್ ಖಾನ್ ಅವರ ಬ್ರ್ಯಾಂಡ್ ಮೌಲ್ಯ ಶೇ 20ರಷ್ಟು, ಅಂದರೆ 106 ಮಿಲಿಯನ್ ಅಮೆರಿಕನ್ ಡಾಲರ್ ಗೆ  ಕುಸಿದಿದೆ. ತರುವಾಯ  93 ಮಿಲಿಯನ್ ಅಮೆರಿಕನ್ ಡಾಲರ್ ಬ್ರ್ಯಾಂಡ್ ಮೌಲ್ಯ ಹೊಂದಿರುವ ನಟಿ ದೀಪಿಕಾ ಪಡುಕೋಣೆ ತಮ್ಮ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಅಕ್ಟೋಬರ್ 2017ರಲ್ಲಿದ್ದಂತೆ ಒಟ್ಟು 20 ಬ್ರ್ಯಾಂಡುಗಳನ್ನು ಪ್ರಮೋಟ್ ಮಾಡುತ್ತಿದ್ದರೆ ಶಾರುಖ್ ಮತ್ತು ದೀಪಿಕಾ ಕ್ರಮವಾಗಿ 21 ಹಾಗೂ 23 ಬ್ರ್ಯಾಂಡ್ ಪ್ರಮೋಶನ್ ಮಾಡುತ್ತಿದ್ದಾರೆ.

ನಟ ಅಕ್ಷಯ್ ಕುಮಾರ್ ಅವರ  ಬ್ರ್ಯಾಂಡ್ ಪ್ರಮೋಶನ್ ನಲ್ಲಿ ಏಳು ಹೊಸ ಉತ್ಪನ್ನಗಳ ಸೇರ್ಪಡೆಯಾಗಿದ್ದು ಅವರ ಬ್ರ್ಯಾಂಡ್ ಮೌಲ್ಯ 2017ರಲ್ಲಿ ಶೇ 97ರಷ್ಟು ಹೆಚ್ಚಾಗಿ 47 ಮಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ.

ಈ ಪಟ್ಟಿಯಲ್ಲಿ ಕಾಣಿಸಿರುವ ಪ್ರಥಮ ಮಹಿಳಾ ಕ್ರೀಡಾಳು  ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಆಗಿದ್ದು ಅವರು  ಟಾಪ್ 15 ಪಟ್ಟಿಯಲ್ಲಿ ಬರುತ್ತಾರಲ್ಲದೆ ತಮ್ಮ 15 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಬ್ರ್ಯಾಂಡ್ ಮೌಲ್ಯದಿಂದ 15ನೇ ಸ್ಥಾನದಲ್ಲಿದ್ದಾರೆ. ಟಾಪ್ 15 ಪಟ್ಟಿಯಲ್ಲಿರುವ ಇನ್ನೊಬ್ಬ ಕ್ರೀಡಾಳು ಮಹೇಂದ್ರ ಸಿಂಗ್ ಧೋನಿ ಆಗಿದ್ದು  ಅವರ ಬ್ರ್ಯಾಂಡ್ ಮೌಲ್ಯ 21 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News