×
Ad

ಕೆ.ಎಂ.ಗಣೇಶ್ ರಾಜಕೀಯ ಅಸ್ತಿತ್ವಕ್ಕಾಗಿ ಹವಣಿಸುತ್ತಿದ್ದಾರೆ : ಕಾವೇರಮ್ಮ ಸೋಮಣ್ಣ ಆರೋಪ

Update: 2017-12-21 19:38 IST

ಮಡಿಕೇರಿ,ಡಿ.21 : ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಗೆದ್ದು ನಗರಸಭಾ ಸದಸ್ಯರಾಗಿ ಆಯ್ಕೆಯಾದ ಕೆ.ಎಂ.ಗಣೇಶ್ ಅವರು ತಮ್ಮ ವೈಯುಕ್ತಿಕ ಲಾಭಕ್ಕಾಗಿ ಜೆಡಿಎಸ್ ಪಕ್ಷಕ್ಕೆ ಸೆರ್ಪಡೆಯಾಗಿದ್ದು, ಇದೀಗ ಆ ಪಕ್ಷದಲ್ಲಿ ಅಸ್ತಿತ್ವ ಕಂಡುಕೊಳ್ಳುವುದಕ್ಕಾಗಿ ನಗರಸಭೆಯ ಆಡಳಿತದ ವಿರುದ್ಧ ವಿನಾಕಾರಣ ಟೀಕೆ ಮಾಡುವ ಮೂಲಕ ಮತ್ತೊಂದು ಪ್ರಹಸನಕ್ಕೆ ಕೈ ಹಾಕಿದ್ದಾರೆ ಎಂದು ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಆರೋಪಿಸಿದ್ದಾರೆ.

ಪ್ರತಿಕಾ ಹೇಳಿಕೆ ನೀಡಿರುವ ಅವರು ನಗರದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆಂದು ರೂ.9 ಲಕ್ಷ ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಉಳಿದ ವಾರ್ಡ್‍ಗಳ ರಸ್ತೆಯನ್ನು ದುರಸ್ತಿ ಪಡಿಸಲು ಕ್ರಿಯಾ ಯೋಜನೆ ತಯಾರಾಗಿದ್ದು, ತಾಂತ್ರಿಕ ಅನುಮೋದನೆ ಪೂರ್ಣಗೊಂಡಿದೆ. ಟೆಂಡರ್ ಪ್ರಕ್ರಿಯೆ ಈ ವಾರದಲ್ಲಿ ಅಂತಿಮಗೊಂಡು ನಂತರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

ವಾಸ್ತವತೆ ಹೀಗಿದ್ದರೂ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹವಣಿಸುತ್ತಿರುವ ಕೆ.ಎಂ.ಗಣೇಶ್ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅರ್ಥಹೀನ ಹೇಳಿಕೆ ನೀಡುತ್ತಿರುವ ಗಣೇಶ್ ಅವರಿಗೆ  ನನ್ನ ರಾಜಿನಾಮೆಯನ್ನು ಕೇಳುವ ಯಾವ ನೈತಿಕತೆಯೂ ಇಲ್ಲವೆಂದು ಕಾವೇರಮ್ಮ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊದಲು ಅವರು ಯಾವ ಪಕ್ಷದಲ್ಲಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕಾಗಿದೆ. ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರು ಎಂದು ಗುರುತಿಸಿಕೊಂಡು ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರಾಗಿರುವುದು ಯಾಕೆ ಎಂದು ಪ್ರಶ್ನಿಸಿರುವ ಅವರು, ಗಣೇಶ್ ಮೊದಲು ನಗರಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ. 

ಆರಂಭದಿಂದಲೂ ನಗರಸಭೆಯ ಆಡಳಿತದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಾ ವೈಚಾರಿಕತೆಯನ್ನು ಬದಿಗೊತ್ತಿರುವ ಗಣೇಶ್, ನಗರದ ಅಭಿವೃದ್ಧಿಗೆ ತೊಡಕಾಗಿದ್ದಾರೆ ಎಂದು ಆರೋಪಿಸಿರುವ ಕಾವೇರಮ್ಮ ಸೋಮಣ್ಣ, ರಾಜಕೀಯವನ್ನು ವೃತ್ತಿಯಾಗಿಸಿಕೊಂಡು ಪಕ್ಷಾಂತರವನ್ನು ಪ್ರವೃತ್ತಿಯಾಗಿ ಅಳವಡಿಸಿಕೊಂಡಿರುವ ಗಣೇಶ್ ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲವೆಂದು ತಿರುಗೇಟು ನೀಡಿದ್ದಾರೆ.  

ನಗರದ ಅಭಿವೃದ್ಧಿಗೆ ಬದ್ಧಳಾಗಿರುವ ನನಗೆ ಜನರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಕಾವೇರಮ್ಮ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News