×
Ad

ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಕೋರ್ಟ್‍ಗೆ ಸತತ ಗೈರಾಗುತ್ತಿದ್ದ ಆರೋಪಿ ಬಂಧನ

Update: 2017-12-21 21:47 IST

ಮೈಸೂರು,ಡಿ.21: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಮಗುವಿಗೆ ಜನ್ಮ ನೀಡುವಂತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರ ಬೀಳುವ ದಿನದಂದೇ ಗೈರಾಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರಣ್ಯಪುರಂ ನಿವಾಸಿ ಕೆ.ಜಿ.ಮಹೇಶ್‍ಗೌಡ ಬಂಧಿತ ಆರೋಪಿ. ಈತ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದರಿಂದ ಆಕೆ  ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಇದನ್ನು ಒಪ್ಪದ ಆರೋಪಿ ಆ ಮಗು ನನ್ನದಲ್ಲ ಎಂದು ವಾದಿಸುತ್ತಿದ್ದ,  ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಯನ್ನು ಡಿಎನ್‍ಎ ಪರೀಕ್ಷೆ ನಡೆಸಲು ಸೂಚಿಸಿತ್ತು. ಡಿಎನ್‍ಎ ಪರೀಕ್ಷೆಯಲ್ಲಿ ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ನಡೆಸಿರುವುದು ಧೃಡಪಟ್ಟಿತ್ತು.

ಈ ಸಂಬಂಧ 6ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆರೋಪಿ ಮಹೇಶ್ ಗೌಡನನ್ನು ನ.23ರಂದು ನ್ಯಾಯಾಲಯಕ್ಕೆ  ಹಾಜರುಪಡಿಸುವಂತೆ ಪೊಲೀಸರಿಗೆ ತಿಳಿಸಿತ್ತು. ಆದರೆ ಆರೋಪಿ ಅನಾರೋಗ್ಯ ನೆಪವೊಡ್ಡಿ ಗೈರಾಗಿದ್ದ. ನಂತರ ನ.29ರಂದು ಹಾಜರುಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯ ತಿಳಿಸಿತ್ತು. ಆದರೆ, ಅಂದು ಕೂಡ ಅನಾರೋಗ್ಯದ ನೆಪವೊಡ್ಡಿದ್ದ. ನಂತರ ಕೋರ್ಟ್ ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿತ್ತು. ಅಂದು ನ್ಯಾಯಾಲಯಕ್ಕೆ ಹಾಜರಾಗದೆ ಆತ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ.

ನಂತರ ಡಿ.13ರಂದು ಪ್ರಕರಣದ ತೀರ್ಪು ನೀಡಲು ಆರೋಪಿಯನ್ನು ಕರೆ ತರುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿತ್ತು. ಅಂದೂ ಕೂಡ ಮಹೇಶ್ ಗೌಡ ನ್ಯಾಯಾಲಯಕ್ಕೆ ಗೈರಾಗಿದ್ದು, ಮತ್ತೆ ಈ ಪ್ರಕರಣದ ತೀರ್ಪನ್ನು ಡಿ.16ಕ್ಕೆ ಮೂಂದೂಡಲಾಗಿತ್ತು.

ಆರೋಪಿ ಮಾತ್ರ ನ್ಯಾಯಾಲಯಕ್ಕೆ ಅಂದು ಬರಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಘೋಷಿತ ಅಪರಾಧಿ ಎಂದು ಪರಿಗಣಿಸಿದ ನ್ಯಾಯಾಧೀಶರು, ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು. 

ಈತ ಆರೋಪಿ ಮಹೇಶ್ ಗೌಡ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದಿನವೂ ವಾಸ್ತವ್ಯ ಬದಲಾವಣೆ ಮಾಡುತ್ತಿದ್ದ. ಇದರಿಂದ ಈತನ ಬಂಧನ ಪೊಲೀಸರಿಗೆ ತಲೆನೋವಾಗಿತ್ತು. ಅಂತಿಮವಾಗಿ ಆತನ ಮೊಬೈಲ್ ಜಾಡು ಹಿಡಿದ ಪೊಲೀಸರು, ಆರೋಪಿಯನ್ನು ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.  ಆತನನ್ನು ನ್ಯಾಯಾಂಗ ವಶಕ್ಕೆ ಪೊಲೀಸರು ಒಪ್ಪಿಸಿದ್ದು, ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಘೋಷಣೆ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News