×
Ad

ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಬಿಜೆಪಿ : ಸಿಎಂ ಸಿದ್ದರಾಮಯ್ಯ

Update: 2017-12-21 23:52 IST

ಗೋಕಾಕ, ಡಿ.21: ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿರುವ ಬಿಜೆಪಿ ಬಗ್ಗೆ ಎಚ್ಚರಿಕೆಯಿಂದ ಇರಬೇಕು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಮತ್ತೆ ಅಧಿಕಾರಕ್ಕೆ ತರಬೇಕೆಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಗುರುವಾರ ಗೋಕಾಕ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂದುತ್ವ ಹಾಗೂ ರಾಮಮಂದಿರವನ್ನು ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ಕೋಮುವಾದವನ್ನು ಪ್ರಚೋದಿಸುತ್ತಲೇ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ. ಹೀಗಾಗಿ, ಮತದಾರರು ಎಚ್ಚರಿಕೆಯಿಂದ ಇದ್ದು,ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಪ್ರಧಾನಿ ವರ್ಚಸ್ಸು ಕುಂದಿರುವುದು ಗುಜರಾತ್ ಚುನಾವಣೆಯಲ್ಲಿ ಗೊತ್ತಾಗಿದೆ. ಆದರೆ, ರಾಹುಲ್ ಗಾಂಧಿ ಅವರ ವರ್ಚಸ್ಸು ಹೆಚ್ಚಾಗಿ 80 ಸೀಟುಗಳನ್ನು ಗೆದ್ದುಕೊಂಡಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದು ರಾಹುಲ್ ಗಾಂಧಿಗೆ ಗೆಲುವಿನ ಉಡುಗೊರೆ ನೀಡೋಣ ಎಂದು ಹೇಳಿದರು.

ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ 72 ಸಾವಿರ ಕೋಟಿ ರೂ. ರೈತರ ಸಾಲವನ್ನು ಮನ್ನಾ ಮಾಡಿದರು. ಪ್ರಸಕ್ತ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕರ್ನಾಟಕ ರೈತರು ಮಾಡಿರುವ 45 ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡಲು ಇನ್ನೂ ಮೀನಮೇಷ ಎಣಿಸುತ್ತಿದೆ. ಬಿಎಸ್ ವೈ ಕೂಡ ಸಿಎಂ ಆಗಿದ್ದಾಗ ರೈತರ ಸಾಲವನ್ನು ಮನ್ನಾ ಮಾಡದೇ ರೈತರನ್ನು ಸಂಕಷ್ಟಕ್ಕೆ ಸೀಲುಕಿಸಿದರು ಎಂದು ವಾಗ್ದಾಳಿ ನಡೆಸಿದರು.

ಗೋಕಾಕ ಕ್ಷೇತ್ರದಲ್ಲಿ ಇದೇ ದಿನ 110 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಈ ಕ್ಷೇತ್ರದ ಶಾಸಕರಾದ ರಮೇಶ್ ಜಾರಕಿಹೊಳಿ ಅವರು ಈ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹೀಗಾಗಿ, ಮುಂದಿನ ಚುನಾವಣೆಯಲ್ಲಿ 50 ಸಾವಿರ ಹೆಚ್ಚಿನ ಮತಗಳಿಂದ ರಮೇರನ್ನು ಗೆಲ್ಲಿಸಬೇಕೆಂದರು. ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿದರು.

'ಸಬ್ ಕೆ ಸಾಥ್ ಸಬ್ ಕೆ ವಿಕಾಸ್' ಎಂದು ಬಾಯಿ ಮಾತಿನಲ್ಲಿ ಹೇಳುವ ಮೋದಿ ಅವರು ಗುಜರಾತ್ ಚುನಾವಣೆಯಲ್ಲಿ ಅಹಿಂದ ಜನಾಂಗದ ಒಬ್ಬ ವ್ಯಕ್ತಿಗೂ ಟಿಕೆಟ್ ನೀಡಲಿಲ್ಲ. ಇದರ ಮಧ್ಯೆ ಜಾತ್ಯತೀತ ಎಂದು ಹೇಳಿಕೊಳ್ಳುವ ಜೆಡಿಎಸ್‌ನವರು ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಕೈಜೋಡಿಸುತ್ತಾರೆ, ಅವರಿಗೆ ಬದ್ಧತೆ ಎಂಬುದಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಮಹಾದಾಯಿ ವಿವಾದ ಬಗೆಹರಿಯುವುದಾದರೆ ನಾನು ಅದನ್ನು ಸ್ವಾಗತಿಸುತ್ತೇನೆ. ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಪ್ರಧಾನಿಯವರು ಕರೆಯುವುದಾದರೆ ಭಾಗವಹಿಸಲು ತಾವು ಈಗಲೂ ಸಿದ್ಧ. ಗೋವಾ ಮುಖ್ಯಮಂತ್ರಿಯವರ ಜೊತೆ ಮಾತುಕತೆ ನಡೆಸಲೂ ತಯಾರು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News