ದಾನವರಿಗೆ ಬಲಿಯಾದ ದಾನಮ್ಮ

Update: 2017-12-22 11:12 GMT

ಬಾಲಕಿಯೊಬ್ಬಳ ಕೈಗೆ ನಿಂಬೆಗಿಡದ ಮುಳ್ಳು ತರಚಿ ಗಾಯವಾದದ್ದನ್ನೇ ಮುಂದಿಟ್ಟುಕೊಂಡು, ‘ಗಡ್ಡಧಾರಿಗಳು ಚೂರಿಯಿಂದ ಇರಿದಿದ್ದಾರೆ’ ಎಂದು ವದಂತಿ ಹಬ್ಬಿಸಿ ಹೊನ್ನಾವರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದ ಸಂಘಪರಿವಾರ ಮತ್ತು ಬಿಜೆಪಿ ನಾಯಕರು ವಿಜಯಪುರದಲ್ಲಿ ದಲಿತ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಬರ್ಬರವಾಗಿ ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಕಿವುಡರು ಮತ್ತು ಕುರುಡರಂತೆ ಓಡಾಡುತ್ತಿದ್ದಾರೆ. ತೀರ್ಥಹಳ್ಳಿಯಲ್ಲಿ ನಂದಿತಾ ಎನ್ನುವ ವಿದ್ಯಾರ್ಥಿನಿ ನಿಗೂಢವಾಗಿ ಸತ್ತಾಗ ಬೀದಿಗಿಳಿದು ಹಿಂಸಾಚಾರ ನಡೆಸಿದ ಸಂಘಪರಿವಾರದ ನಾಯಕರೆಲ್ಲ ಈಗ ತಲೆಮರೆಸಿಕೊಂಡಿದ್ದಾರೆ. ನಂದಿತಾ ಎನ್ನುವ ವಿದ್ಯಾರ್ಥಿನಿ ಪರೀಕ್ಷೆಯ ಒತ್ತಡದ ಕಾರಣಕ್ಕಾಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಆ ಬಾಲಕಿಯ ಮೇಲೆ ಅನ್ಯಕೋಮಿನ ಜನರು ಸಾಮೂಹಿಕವಾಗಿ ಅತ್ಯಾಚಾರ ಗೈದು ವಿಷಕುಡಿಸಿ ಕೊಂದು ಹಾಕಿದ್ದಾರೆ ಎಂಬ ಹಸಿ ಸುಳ್ಳನ್ನು ಮಾಧ್ಯಮಗಳ ಮೂಲಕ ಬಿತ್ತಲಾಯಿತು. ಬಹುತೇಕ ಪತ್ರಿಕೆಗಳು ಈ ಸಾವನ್ನು ‘ಅತ್ಯಾಚಾರ, ಕೊಲೆ’ ಎಂದು ಮುಖಪುಟದಲ್ಲಿ ಬರೆದವು. ಒಂದು ಆತ್ಮಹತ್ಯೆಯನ್ನು ಅತ್ಯಾಚಾರ, ಕೊಲೆಯಾಗಿ ಪರಿವರ್ತಿಸಿ ತೀರ್ಥಹಳ್ಳಿಯ ಅಮಾಯಕ ಮುಸ್ಲಿಮರ ಅಂಗಡಿಗಳಿಗೆ ಸಂಘಪರಿವಾರ ಬೆಂಕಿ ಹಚ್ಚಲಾಯಿತು. ವಿಪರ್ಯಾಸವೆಂದರೆ, ಸಾಕ್ಷಾಧಾರಗಳು ಇಲ್ಲದಿದ್ದರೂ, ನಂದಿತಾ ಪ್ರಕರಣವನ್ನು ಸಾಮೂಹಿಕ ಅತ್ಯಾಚಾರ, ಕಗ್ಗೊಲೆ ಎಂದೆಲ್ಲ ಬರೆದ ಮಾಧ್ಯಮಗಳ ಕಣ್ಣಿಗೆ ದಾನಮ್ಮ ಎನ್ನುವ ಎಳೆ ವಿದ್ಯಾರ್ಥಿನಿಯ ಮೇಲೆ ನಡೆದ ಬರ್ಬರ ಅತ್ಯಾಚಾರ ಮತ್ತು ಕೊಲೆ ಕಣ್ಣಿಗೆ ಬಿದ್ದಿಲ್ಲ. ವದಂತಿ ಸುದ್ದಿಗಳನ್ನು ಆಸಕ್ತಿಯಿಂದ ಪ್ರಕಟಿಸುವ ಈ ಮಾಧ್ಯಮಗಳಿಗೆ ದಾನಮ್ಮಳ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆ ಯಾಕೆ ಮುಖಪುಟ ಸುದ್ದಿಯಾಗಿಲ್ಲ? ಹೊನ್ನಾವರದಲ್ಲಿ ಬಾಲಕಿಗೆ ಮುಳ್ಳುತರಚಿದ ಸುದ್ದಿಯನ್ನು ಅತ್ಯಾಸಕ್ತಿಯಿಂದ ಪ್ರಸಾರ ಮಾಡಿದ ಮಾಧ್ಯಮಗಳು ದಾನಮ್ಮಳ ವಿಷಯದಲ್ಲೇಕೆ ವೌನ ತಾಳಿವೆ?

  ದಾನಮ್ಮಳ ವಿಷಯದಲ್ಲಿ ಮಾಧ್ಯಮಗಳಾಗಲಿ, ಸಂಘಪರಿವಾರವಾಗಲಿ ತುಟಿ ಬಿಚ್ಚದೇ ಇರುವುದಕ್ಕೆ ಮುಖ್ಯ ಕಾರಣ ಆಕೆ ದಲಿತ ಸಮುದಾಯಕ್ಕೆ ಸೇರಿದ ಬಾಲಕಿ ಎನ್ನುವುದಾಗಿದೆ. ಆಕೆ ನಗರದ ಯಾವುದೇ ಐಟಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಹುಡುಗಿಯಾಗಿದ್ದರೆ ಅಥವಾ ದಿಲ್ಲಿಯ ಯಾವುದೇ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರೆ ಆಕಾಶ ಭೂಮಿ ಒಂದಾಗುತ್ತಿತ್ತು. ಬೀದಿ ಬೀದಿಗಳಲ್ಲಿ ಕ್ಯಾಂಡೆಲ್ ಬೆಳಕುಗಳು ಕರಗುತ್ತಿದ್ದವು. ಅತ್ಯಾಚಾರ, ಮಹಿಳಾ ದೌರ್ಜನ್ಯದಂತಹ ಪ್ರಕರಣಗಳಲ್ಲಿ ಸಮಾಜದ ದ್ವಂದ್ವ ನೀತಿ ಇದರಿಂದ ಬಯಲಾಗುತ್ತದೆ. ಈ ದೇಶದಲ್ಲಿ ಅತ್ಯಾಚಾರ ಸುದ್ದಿಯಾಗಬೇಕಾದರೆ ಆಕೆ ವಿದ್ಯಾವಂತೆಯಾಗಿರಬೇಕು ಜೊತೆಗೆ ಮೇಲ್ಜಾತಿಗೆ ಸೇರಿರಬೇಕು. ಅಷ್ಟೇ ಅಲ್ಲ, ಅತ್ಯಾಚಾರ ನಗರ ಪ್ರದೇಶಗಳಲ್ಲಿ ನಡೆದಿರಬೇಕು. ಆರೋಪಿಗಳು ನಿರ್ದಿಷ್ಟ ಸಮುದಾಯದ ವ್ಯಕ್ತಿಗಳಾಗಿದ್ದಿದ್ದರೆ ದಾನಮ್ಮ ಎನ್ನುವ ವಿದ್ಯಾರ್ಥಿನಿಯ ವಿಷಯದಲ್ಲಿ ಸಂಘಪರಿವಾರ ಬಾಯಿ ತೆರೆಯುತ್ತಿತ್ತು ಮತ್ತು ಊರಿಗೆ ಬೆಂಕಿ ಹಚ್ಚುತ್ತಿತ್ತು. ಕನಿಷ್ಠ ಆರೋಪಿಗಳ ಹೆಸರು ಬಹಿರಂಗವಾಗದೇ ಇದ್ದಿದ್ದರೂ, ‘ಗಡ್ಡಧಾರಿಗಳ’ ವದಂತಿ ಹಬ್ಬಿಸಿಯಾದರೂ ಅಮಾಯಕರ ಅಂಗಡಿಗಳಿಗೆ ಬೆಂಕಿ, ಮಸೀದಿಗಳಿಗೆ ಕಲ್ಲು ತೂರಾಟ ಮಾಡಿ ‘ಹಿಂದುತ್ವ’ದ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿತ್ತು. ಅವರ ದುರದೃಷ್ಟವೆಂದರೆ, ಆರೋಪಿಗಳು ಯಾರು ಎನ್ನುವುದು ಬೆಳಕಿಗೆ ಬಂದಿದೆ. ಅದಾರಾಚೆಗೆ ಇನ್ನೂ ಒಂದು ಸಂಕಟ ಇದೆ. ಅತ್ಯಾಚಾರಗೈದ ಪ್ರಮುಖ ಆರೋಪಿ ಸಂಘಪರಿವಾರದ ಕಾರ್ಯಕರ್ತ ಮತ್ತು ಆತ ಬಿಜೆಪಿ ಮುಖಂಡರೊಂದಿಗೆ ಗುರುತಿಸಿಕೊಂಡಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆತ ಸಾಮಾಜಿಕ ತಾಣಗಳಲ್ಲಿ ಈಗಾಗಲೇ ಹತ್ತು ಹಲವು ಪೋಟೋಗಳನ್ನು ಹಂಚಿಕೊಂಡಿದ್ದು, ಸಂಘಪರಿವಾರದ ಜೊತೆಗೆ ಆತನಿಗಿರುವ ಸಂಬಂಧವನ್ನು ಹೇಳುತ್ತಿದೆ. ಹೆಣ್ಣಿನ ಕುರಿತಂತೆ ಅದರಲ್ಲೂ ‘ಹಿಂದೂ ಮಾತೆ’ಯರ ಕುರಿತಂತೆ ಸಂಘಪರಿವಾರ ಅದೆಷ್ಟು ನಿಕೃಷ್ಟ ಮನಸ್ಥಿತಿಯನ್ನು ಹೊಂದಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಬಹುಶಃ ಹಿಂದೂ ಮಾತೆಯರ ಮೇಲೆ ದೌರ್ಜನ್ಯವೆಸಗಿ ಕೊಂದು ಹಾಕುವ ಹಕ್ಕುಗಳು ನಮ್ಮ ಸಂಘಪರಿವಾರ ಕಾರ್ಯಕರ್ತರಿಗೆ ಮಾತ್ರ ಇದೆ ಎಂದು ಹಿಂದುತ್ವ ರಕ್ಷಕರು ಘೋಷಿಸಿಕೊಂಡಂತಾಗಿದೆ. ಈ ಹಿಂದೆ ಗಲಭೆ ಎಬ್ಬಿಸುವುದಕ್ಕಾಗಿಯೇ ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದವರು ಇವರು. ದಾನಮ್ಮ ಪ್ರಕರಣದಲ್ಲೂ ಆರಂಭದಲ್ಲಿ ಅನ್ಯ ಕೋಮಿನ ಜನರ ತಲೆಗೆ ಇದನ್ನು ಕಟ್ಟುವ ಪ್ರಯತ್ನ ನಡೆಯಿತು. ಆದರೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಮುತುವರ್ಜಿ ವಹಿಸಿದ್ದುದರಿಂದ ಅವರ ಸಂಚು ವಿಫಲವಾಯಿತು. ಇದೇ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರು ಈವರೆಗೆ ಸ್ಥಳಕ್ಕೆ ಭೇಟಿ ನೀಡಿಲ್ಲ. ಯಾವುದೇ ಸಂಘಪರಿವಾರ ಮುಖಂಡರು ಘಟನೆಯನ್ನು ಖಂಡಿಸಿಲ್ಲ ಮತ್ತು ಸಾಂತ್ವನ ಹೇಳಿಲ್ಲ.

 ದಾನಮ್ಮಳ ಅತ್ಯಾಚಾರ ಮತ್ತು ಹತ್ಯೆಯ ಆರೋಪಿಗಳನ್ನು ರಕ್ಷಿಸುವ ಸಂಚೊಂದು ನಡೆಯುತ್ತಿದೆ ಎಂದು ಸಂಘಟನೆಗಳು ಆರೋಪಿಸುತ್ತಿವೆ. ದಾನಮ್ಮಳ ಅಂತ್ಯಸಂಸ್ಕಾರವನ್ನು ಅವಸರವಸರವಾಗಿ ಮಾಡಲಾಯಿತು. ಆಕೆಯ ದೇಹವನ್ನು ಹೂಳುವ ಬದಲು ಸುಟ್ಟು ಹಾಕಲಾಗಿದೆ. ಇದು ಪರೋಕ್ಷವಾಗಿ ಆರೋಪಿಗಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಸಂಘಟನೆಗಳು ಆರೋಪಿಸುತ್ತಿವೆ. ತನಿಖೆ ಮತ್ತು ಪ್ರಮುಖ ಆರೋಪಿಗಳನ್ನು ಬಂಧಿಸುವ ವಿಚಾರದಲ್ಲಿ ಪೊಲೀಸ್ ಇಲಾಖೆ ನಿಧಾನಗತಿಯಲ್ಲಿ ಮುಂದಡಿಯಿಡುತ್ತಿದೆ. ಈಗಾಗಲೇ ಸರಕಾರ ಕುಟುಂಬಕ್ಕೆ ಪರಿಹಾರವನ್ನು ಘೋಷಿಸಿದೆ. ಆದರೆ ಹಣ ಆ ಕುಟುಂಬಕ್ಕಾಗಿರುವ ನಷ್ಟವನ್ನು ತುಂಬಲಾರದು. ದಲಿತ ಹೆಣ್ಣು ಮಕ್ಕಳ ಮಾನ, ಪ್ರಾಣವನ್ನು ಹಣದಿಂದ ತುಂಬಿಕೊಡಲು ಸಾಧ್ಯವಾಗದು. ವಿದ್ಯೆ ಕಲಿಯಲೆಂದು ಸಾಗುತ್ತಿದ್ದ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಸಾಮೂಹಿಕವಾಗಿ ಅತ್ಯಾಚಾರಗೈದು ಕೊಂದು ಹಾಕುವುದರ ಹಿಂದೆ ಜಾತೀಯ ಮನಸ್ಸುಗಳೂ ಕೆಲಸ ಮಾಡಿವೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ನ್ಯಾಯಸಿಗಬೇಕು ಎಂದು ದಲಿತ ಸಂಘಟನೆಗಳು ಮಾತ್ರವಲ್ಲ ಪ್ರಗತಿಪರ ಸಂಘಟನೆಗಳೆಲ್ಲ ಒಂದಾಗಿವೆ. ಆದರೆ ಪ್ರತಿಭಟನೆ ಯಾವ ರೀತಿಯಲ್ಲೂ ದಾರಿ ತಪ್ಪದಂತೆ ನೋಡಿಕೊಳ್ಳಲೇಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ, ಅಮಾಯಕರ ಬದುಕಿಗೆ ತೊಂದರೆಯುಂಟು ಮಾಡುವ ಪ್ರತಿಭಟನೆಗಳಿಂದ ದಲಿತ ತರುಣರೇ ಸಂಕಷ್ಟ ಅನುಭವಿಸಬೇಕಾಗಬಹುದು. ಸಂಘಪರಿವಾರದ ಹಿಂಸಾ ಪ್ರತಿಭಟನೆ ನಮಗೆ ಮಾದರಿಯಾಗುವುದು ಬೇಡ. ದಾನಮ್ಮಳಿಗೂ ಅವಳಂತಹ ನೂರಾರು ದಲಿತ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಬೇಕು. ಇನ್ನೊಬ್ಬ ದಾನಮ್ಮಳ ಹೆಣ ಈ ನೆಲದಲ್ಲಿ ಬೀಳಬಾರದು. ಈ ನಿಟ್ಟಿನಲ್ಲಿ ಜನರನ್ನು, ಸರಕಾರವನ್ನು ಜಾಗೃತಗೊಳಿಸುವ ಉದ್ದೇಶವಷ್ಟೇ ಪ್ರತಿಭಟನೆಗಿರಲಿ. ಪ್ರತಿಭಟನಾಕಾರರ ಆಗ್ರಹಗಳಿಗೆ, ನೋವುಗಳಿಗೆ ಸರಕಾರ ಸ್ಪಂದಿಸಿ ತಕ್ಷಣ ಆರೋಪಿಗಳೆಲ್ಲರನ್ನೂ ಬಂಧಿಸಲು ಸರಕಾರ ಕಾನೂನು ಇಲಾಖೆಗೆ ಸೂಚನೆ ನೀಡುವಂತಾಗಬೇಕು. ಇಲ್ಲದೇ ಇದ್ದರೆ, ಜನರ ಆಕ್ರೋಶ ದಾರಿ ತಪ್ಪುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News