ಶಿವಮೊಗ್ಗ: ಬಿಜೆಪಿಗೆ ಸೇರ್ಪಡೆಯಾದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಷಣ್ಮುಖಪ್ಪ
ಶಿವಮೊಗ್ಗ, ಡಿ. 22: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮುಖಂಡ, ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಷಣ್ಮುಖಪ್ಪರವರು ಶುಕ್ರವಾರ ನಗರದ ಬಿಜೆಪಿ ಕಚೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಶಾಸಕ ಬಿ.ವೈ.ರಾಘವೇಂದ್ರ, ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡರವರು ಷಣ್ಮುಖಪ್ಪ ಮತ್ತವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡರು. ನಂತರ ನಡೆದ ಕಾರ್ಯಕರ್ತರ ಸಭೆಯಲ್ಲಿ ಷಣ್ಮುಖಪ್ಪ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉತ್ತಮ ಆಡಳಿತ ಮೆಚ್ಚಿ ಹಾಗೂ ಬಿ.ಎಸ್.ಯಡಿಯೂರಪ್ಪರವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶದಿಂದ ತಾವು ಬಿಜೆಪಿ ಮರು ಸೇರ್ಪಡೆಯಾಗುತ್ತಿದ್ದೆನೆ ಎಂದು ತಿಳಿಸಿದರು.
ಮುಂಬರುವ ವಿಧಾನಸಭೆ ಚುನಾಣೆಯಲ್ಲಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೆನೆ. ಈಗಿನಿಂದಲೇ ಮನೆ ಮನೆಗೆ ತೆರಳಿ ಪಕ್ಷದ ಪರವಾಗಿ ಮತಯಾಚನೆ ಮಾಡುತ್ತೆನೆ. ಈ ಬಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯು ಅತ್ಯದಿಕ ಮತಗಳ ಅಂತರದಲ್ಲಿ ಜಯ ಸಾಧಿಸುವುದು ನಿಶ್ಚಿತವಾಗಿದೆ ಎಂದು ಹೇಳಿದರು.
ಶಿವಮೊಗ್ಗಕ್ಕೆ ರ್ಯಾಲಿ: ಸುದ್ದಿಗೋಷ್ಠಿಯಲ್ಲಿ ಬಿ.ವೈ.ರಾಘವೇಂದ್ರ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ನೇತೃತ್ವದಲ್ಲಿ ರಾಜ್ಯದಲ್ಲಿ ನವ ಕರ್ನಾಟಕ ನಿರ್ಮಾಣದ ಗುರಿಯೊಂದಿಗೆ ರಾಜ್ಯದಾದ್ಯಂತ ನಡೆಯುತ್ತಿರುವ ಪರಿವರ್ತನಾ ರ್ಯಾಲಿಯು ಡಿ.27ರಿಂದ ಜ.2 ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಆಡಳಿತ ರೂಢ ಕಾಂಗ್ರೆಸ್ ಸರ್ಕಾರದ ಹಣ ಮತ್ತು ಅಧಿಕಾರಿಗಳನ್ನು ದುರು ಪಯೋಗಪಡಿಸಿಕೊಂಡು ಸತ್ಯದ ನಡಿಗೆ ಸಮಾವೇಶಗಳನ್ನು ಮಾಡುತ್ತಿದೆ. ರೈತರ ಹಿತವನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸಿದ್ದರಾಮ್ಯಯ ನೇತೃತ್ವದ ಕಾಂಗ್ರೆಸ್‍ನ ದುರಾಡಳಿತವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಪರಿವರ್ತನಾ ರ್ಯಾಲಿ ನಡೆಯುತ್ತಿದ್ದು, ಈಗಾಗಲೇ 123 ಕ್ಷೇತ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ಜನರ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಡಿ. 27 ರಂದು ಜಿಲ್ಲೆಗೆ ಪರಿವರ್ತನಾ ರ್ಯಾಲಿ ಪ್ರವೇಶ ಮಾಡಲಿದ್ದು, ಅಂದು ಶಿಕಾರಿಪುರ, ಸೊರಬದಲ್ಲಿ ಸಮಾವೇಶ ಗಳು ನಡೆಯಲಿವೆ. 28ರಂದು ಸಾಗರ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹರಮಘಟ್ಟದಲ್ಲಿ, ಸಂಜೆ ಶಿವಮೊಗ್ಗ ಎನ್‍ಇಎಸ್ ಮೈದಾನದಲ್ಲಿ ಹಾಗೂ 29 ತೀರ್ಥಹಳ್ಳಿಯಲ್ಲಿ ಸಮಾವೇಶಗಳು ನಡೆಯಲಿದ್ದು, ಜ. 2ರಂದು ಭದ್ರಾವತಿಯಲ್ಲಿ ನಡೆಯಲಿದೆ. ಈ ಸಮಾವೇಶ ದಲ್ಲಿ ಒಟ್ಟು 2 ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಲಿ ದ್ದಾರೆ ಎಂದು ತಿಳಿಸಿದರು.