×
Ad

ದಲಿತ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ:ಶಿವಮೊಗ್ಗದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Update: 2017-12-22 17:22 IST

ಶಿವಮೊಗ್ಗ, ಡಿ. 22: ವಿಜಯಪುರದಲ್ಲಿ ದಲಿತ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ನಡೆಸಿದ ಆರೋಪಿಗಳನ್ನು ಬಂಧಿಸಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ಶಿವಮೊಗ್ಗ ನಗರದಲ್ಲಿ ಗುರುವಾರದಿಂದ ನಡೆಯುತ್ತಿರುವ ಪ್ರತಿಭಟನೆಯ ಸರಣಿ ಶುಕ್ರವಾರ ಕೂಡ ಮುಂದುವರಿದಿದೆ. 

ಜೆಡಿಎಸ್ ಮಹಿಳಾ ಘಟಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕ್ಯಾಂಪಸ್ ಫ್ರಂಟ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಪ್ರತ್ಯೇಕವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ನಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿ, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದರು. 

ಇತ್ತೀಚೆಗೆ ಮಕ್ಕಳ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ಈ ದೌರ್ಜನ್ಯ ತಡೆಗಟ್ಟುವಲ್ಲಿ ಕೇಂದ್ರ - ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಕಲ್ಪಿಸುವಲ್ಲಿ ಸೋತಿವೆ ಎಂದು ಜೆಡಿಎಸ್ ಮಹಿಳಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ. 

ಕೊಲೆಯಾದ ಬಾಲಕಿಗೆ ನ್ಯಾಯ ಒದಗಿಸುವ ಕರ್ತವ್ಯ ರಾಜ್ಯ ಸರ್ಕಾರದ್ದಾಗಿದೆ. ಕೇವಲ ಬಾಲಕಿಯ ಮನೆಗೆ ತೆರಳಿ ಸಾಂತ್ವನ ಹೇಳಿ ಪರಿಹಾರ ನೀಡಿದರೆ ಪ್ರಯೋಜನವಿಲ್ಲ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಶಿಕ್ಷೆ ವಿಧಿಸಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ದಲಿತ ವಿದ್ಯಾರ್ಥಿನಿ ದಾನಮ್ಮ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತದ್ದಾಗಿದೆ. ಇದೊಂದು ಹೀನ ಕೃತ್ಯವಾಗಿದೆ. ಈ ರೀತಿಯ ಘಟನೆಗಳಿಂದ ಹೆಣ್ಣು ಮಕ್ಕಳು ಭಯಭೀತರಾಗುವಂತಾಗಿದೆ. 

ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ತಕ್ಷಣವೇ ಕ್ರಮಕೈಗೊಳ್ಳಬೇಕು. ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. ಬಾಲಕಿಯ ಕುಟುಂಬಕ್ಕೆ ಸೂಕ್ತ ನ್ಯಾಯ ಕಲ್ಪಿಸಿಕೊಡಬೇಕು. ಈ ರೀತಿಯ ಕೃತ್ಯಗಳಲ್ಲಿ ತೊಡಗುವವರ ವಿರುದ್ದ ಉಗ್ರ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಡಿಎಸ್‍ಎಸ್: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ನಡೆಸಿದರು. ನಂತರ ಡಿ.ಸಿ. ಕಚೇರಿ ಮುಂಭಾಗ ಧರಣಿ ನಡೆಸಿದ ಕಾರ್ಯಕರ್ತರು, ವಿದ್ಯಾರ್ಥಿನಿಯ ಹತ್ಯೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಂತಕರನ್ನು ಬಂಧಿಸಿ, ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 

ದಲಿತ ಸಮುದಾಯ ನಿರಂತರವಾಗಿ ಶೋಷಣೆ, ದೌರ್ಜನ್ಯಕ್ಕೆ ಗುರಿಯಾಗುತ್ತ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ದಾನಮ್ಮ ಎಂಬ ಅಮಾಯಕ, ಮುಗ್ದ ಯುವತಿಯ ಹತ್ಯೆ ಸಾಕ್ಷಿಯಾಗಿದೆ. ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು. ಭವಿಷ್ಯದಲ್ಲಿ ಈ ರೀತಿಯ ಹೀನ ಕೃತ್ಯಗಳಿಗೆ ಆಸ್ಪದವಾಗದಂತೆ ರಾಜ್ಯ ಸರ್ಕಾರ ಎಚ್ಚರವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News