ಕೊಳ್ಳೇಗಾಲ : ಮಾನಸ ಪ್ರಶಸ್ತಿ ಪ್ರದಾನ ಸಮಾರಂಭ

Update: 2017-12-22 12:19 GMT

ಕೊಳ್ಳೇಗಾಲ,ಡಿ.22: ವಿದ್ಯಾರ್ಥಿಗಳು ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸತತ ಪ್ರಯತ್ನ ಮಾಡಬೇಕು ಹಾಗೂ ಸೇವಾ ಮನೋಭಾವನೆಯನ್ನು ರೂಡಿಸಿಕೊಳ್ಳಬೇಕು ಎಂದು ಖ್ಯಾತ ಕವಿಗಳಾದ ಬಿ.ಆರ್.ಲಕ್ಷ್ಮಣ ರಾವ್ ಹೇಳಿದರು.

ನಗರದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ  ಶುಕ್ರವಾರ ನಡೆದ ಮಾನಸೋತ್ಸವ ಹಾಗೂ ಆರ್. ಸಿದ್ದೇಗೌಡ ಸ್ಮರಣಾರ್ಥ ಮಾನಸ ಪ್ರಶಸ್ತಿ  ಪ್ರದಾನ ಸಮಾರಂಭದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.

ವಿದ್ಯಾರ್ಥಿಗಳು ಕನ್ನಡ ಬಗ್ಗೆ ಹೆಚ್ಚು ಕಾಳಜಿವಹಿಸಿ ಬೇಕು. ಸುಮಾರು 2000 ವರ್ಷಗಳ ಪ್ರಾಚೀನ ಕಾಲದ ಭಾಷೆಯನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಆದರೆ ಇಂದು ಕನ್ನಡ ಮರೆಯಾಗುತ್ತಿದೆ.  ಬೆಂಗಳೂರಿನಲ್ಲಿ ಇಂದು ಕನ್ನಡಿಗರು ಬಹಳಷ್ಟು ಕಡಿಮೆ ಆಗಿರುವುದು ಆತಂಕಕಾರಿ ಸಂಗತಿ.

ಅಲ್ಲಿ ನಾವು ಇಂಧನ ಉಳಿಸಿ ಪೆಟ್ರೋಲ್ ಉಳಿಸಿ ಎಂಬ ನಾಮ ಫಲಕಗಳನ್ನು ಹಾಕುವ ಬದಲು ಕನ್ನಡವನ್ನು ಉಳಿಸಿ ಎಂಬ ಫಲಕ ಹಾಕಬೇಕೆಂದು ಹೇಳಿದರು. “ದೇವರೆ ಅಗಾಧ ನಿನ್ನ ಕರುಣೆಯ ಕಡಲು ನನಗೆ ಸಾಧ್ಯವೇ ಅದರ ಆಳವಳೆಯಲು” ಎಂಬ ಗೀತೆಯನ್ನು ಹಾಡಿ ಎಲ್ಲರ ಮನಸ್ಸನ್ನು ಸೂರೆಗೊಂಡು. ಡಾ.ಸಿ.ಎನ್.ಮಂಜುನಾಥ್‍ರವರು ಮನುಷ್ಯನ ಭೌತಿಕ ಹೃದ್ರೋಗ ತಜ್ಞರಾದರೆ ನಾನು ಕಾವ್ಯದ ಹೃದಯ ತಜ್ಞ ಎಂದು ಹಾಸ್ಯದ ಮೂಲಕವೇ ಮಾತು ಮುಗಿಸಿದರು.

ನಂತರ ಆರ್. ಸಿದ್ದೇಗೌಡ ಪ್ರಶಸ್ತಿ ಪಡೆದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಖ್ಯಾತ ಹೃದ್ರೋಗ ತಜ್ಞರೂ ಮತ್ತು ನಿರ್ದೇಶಕರೂ ಆದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ  ಶಿಕ್ಷಣ ಸಂಸ್ಥೆಗಳು ತಾರತಮ್ಯವಿಲ್ಲದ ಶಿಕ್ಷಣವನ್ನು ನೀಡಬೇಕು. ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆ ಮಾಡಬೇಕು. ಹಾಗೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು, ಹಣ ಮತ್ತು ಅಧಿಕಾರವನ್ನು ಒಳ್ಳೆಯದಕ್ಕಾಗಿ ಉಪಯೋಗಿಸಬೇಕು. ವಿದ್ಯಾರ್ಥಿಗಳು ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸತತ ಪ್ರಯತ್ನ ಮಾಡಬೇಕು. ಸೇವಾ ಮನೋಭಾವನೆಯನ್ನು ರೂಢಿಸಿಕೊಂಡಾಗ ನಮ್ಮ ಪದವಿ ಪಾರಿತೋಷಕಗಳಿಗೆ ಮೌಲ್ಯವಿರುತ್ತದೆ. ಆದರೆ ಬೇಸರ ಸಂಗತಿ ಎಂದರೆ  ವಿದ್ಯಾರ್ಥಿಗಳು ತುಂಬಾ ಮೊಬೈಲ್ ಫೋನ್‍ಗಳನ್ನು  ವಿ ಉಪಯೋಗಿಸುತ್ತಿದ್ದಾರೆ, ಫೇಸ್ ಬುಕ್, ವಾಟ್‍ಆಪ್, ಗೋಗಲ್ ಮತ್ತು ಮಾರಕ ಮಾದಕ ವಸ್ತುಗಳಿಂದ ಹಾಳಾಗುತ್ತಿದ್ದಾರೆ ಇದನ್ನು ತಡೆಗಟಬೇಕು ಎಂದು ಹೇಳಿದರು.

ಹೃದಯ ಭೌಗೋಳಿಕವಾಗಿ ಚಿಕ್ಕದಾಗಿರಬೇಕು. ಆದರೆ ಸಾಮಾಜಿಕವಾಗಿ ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಹೃದಯ ದೊಡ್ಡದಾಗಿರಬೇಕು. ಆಗ ನಾವು ಸಮಾಜ ಸೇವೆಗೆ ಬದ್ಧರಾಗಿರುತ್ತೇವೆ. ಮಾನಸ ಪ್ರಶಸ್ತಿಯನ್ನು ನಾನು ಸ್ವೀಕರಿಸುತ್ತಿರುವುದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸ್ವೀಕರಿಸಿದ ಪದ್ಮಶ್ರೀ ಪ್ರಶಸ್ತಿಗಿಂತಲೂ ಹೆಚ್ಚು ಸಂತೋಷ ತಂದಿದೆ.

ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯದ ದೃಷ್ಟಿಯಿಂದ ಸುತ್ತಮುತ್ತಲಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಇದು ನಮ್ಮ ಕರ್ತವ್ಯವೇ ಹೊರತು ಸರ್ಕಾರದ ಕರ್ತವ್ಯವಲ್ಲ. ಜೀವನದಲ್ಲಿ 3 ಅಂಶ ತುಂಬಾ ಮುಖ್ಯ. ಆಸ್ಪತ್ರೆಗೆ ಹೋದಾಗ ಆರೋಗ್ಯ ಎಷ್ಟು ಮುಖ್ಯ, ಜೈಲಿಗೆ ಹೋದಾಗ ಸ್ವತಂತ್ರ ಎಷ್ಟು ಮುಖ್ಯ, ರುದ್ರಭೂಮಿಗೆ ಹೋದಾಗ ಜೀವ ಎಷ್ಟು ಮುಖ್ಯ ಎಂದು ತಿಳಿಯುತ್ತದೆ. ವೈದ್ಯರಿಗೆ ಮತ್ತು ಮಾನವರಿಗೆ ಮಾನವೀಯತೆ ಕರುಣೆ ತುಂಬಾ ಮುಖ್ಯ. ಚಿಕಿತ್ಸೆ ಮೊದಲು ಪಾವತಿ ನಂತರ ಎಂಬುದು ಆಸ್ಪತ್ರೆಯ ಧ್ಯೇಯವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಬಿಜೆಪಿಯ ಉಪಾಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್, ಹನೂರು ವಿಧಾನ ಸಬಾ ಕ್ಷೇತ್ರದ ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಯಮದೂರು ಸಿದ್ದರಾಜು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಕೆ.ನಟರಾಜುರವರು ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಹಾಗೂ ಇನ್ನೂ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News