ಮೂಡಿಗೆರೆ : ಎಬಿವಿಪಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ

Update: 2017-12-22 12:23 GMT

ಮೂಡಿಗೆರೆ, ಡಿ.22: ರಾಜ್ಯದ ಶೈಕ್ಷಣಿಕ ಪರಿಸ್ಥಿತಿಯನ್ನು ದಿವಾಳಿಗೆ ತಳ್ಳಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಎಬಿವಿಪಿಯಿಂದ ಮೂಡಿಗೆರೆ ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು. 
ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಹಸೀಲ್ದಾರ್‍ಗೆ ಮನವಿ ಸಲ್ಲಿಸಲಾಯಿತು.

ಶಿಕ್ಷಣವೆಂಬುದು ಮಾರಾಟದ ವಸ್ತುವಾಗದೆ ಸರ್ವರಿಗೂ ಸಿಗುವಂತಾಗಬೇಕು. ರಾಜ್ಯದಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಇದಕ್ಕೆ ಕಾಲೇಜುಗಳಲ್ಲಿ ಮೂಲಸೌಕರ್ಯ, ಅಧ್ಯಾಪಕರ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ, ನಿಷ್ಕ್ರಿಯತೆಯೇ ಕಾರಣ. ರಾಜ್ಯ ಸರ್ಕಾರದ ದೂರದೃಷ್ಟಿ ಕೊರತೆ ಮತು ನಿರ್ಲಕ್ಷ್ಯತನವೇ ಕಾರಣ. ರಾಜ್ಯದ ಬೆಂಗಳೂರು ವಿವಿ, ಮೈಸೂರು ವಿವಿ, ರಾಜೀವ್‍ಗಾಂಧಿ ವೈದ್ಯಕೀಯ ವಿವಿ, ಕಾನೂನು ವಿವಿ, ತುಮಕೂರು ವಿವಿ ಮತ್ತು ಜನಪದ ವಿವಿಗಳಿಗೆ ಕುಲಪತಿಗಳನ್ನು ನೇಮಕಾತಿ ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರಾಜ್ಯದಲ್ಲಿ ಪ್ರಸ್ತುತ 413 ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದು ಒಟ್ಟಾರೆಯಾಗಿ 3.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಸರ್ಕಾರದ 413 ಕಾಲೇಜುಗಳಲ್ಲಿ ಶೇ.90ರಷ್ಟು ಕಾಲೇಜುಗಳ ಸ್ಥಿತಿ ಅತ್ಯಂತ ದಯನೀಯವಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ 3 ಸಾವಿರಕ್ಕೂ ಹೆಚ್ಚು ಅಧ್ಯಾಪಕರ ಕೊರತೆಯಿದೆ. ವಿದ್ಯಾರ್ಥಿಗಳ ಅನುಪಾತಕ್ಕೆ ಅನುಗುಣವಾಗಿ 6 ಸಾವಿರ ಅಧ್ಯಾಪಕರ ಅವಶ್ಯಕತೆಯಿದೆ. 400ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಖಾಯಂ ಪ್ರಾಚಾರ್ಯರು, ಉಪನ್ಯಾಸಕರಿಲ್ಲ. ಶೌಚಾಲಯಗಳಿಲ್ಲ. ಬೋಧನಾ ಕೊಠಡಿಗಳಿಲ್ಲ. ಗ್ರಂಥಾಲಯಗಳ ಸುಳಿವಿಲ್ಲ. ದೈಹಿಕ ಶಿಕ್ಷಕರಿಲ್ಲ, ಕ್ರೀಡಾ ಸಾಮಗ್ರಿಗಳಿಲ್ಲ ಎಂದು ದೂರಿದರು.  

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಕುಲಪತಿ ಸ್ಥಾನಗಳಿಗೆ ಕೂಡಲೇ ಕುಲಪತಿಗಳನ್ನು ನೇಮಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು. ರಾಜ್ಯದಲ್ಲಿ ಶೇ.90ರಷ್ಟು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಪ್ರಾಚಾರ್ಯರಿಲ್ಲದೆ ಕಾಲೇಜುಗಳು ಶೈಕ್ಷಣಿಕ ಪ್ರಗತಿಯಲ್ಲಿ ಕುಂಟುತಾ ಸಾಗಿದೆ.ಪ್ರಚಾರ್ಯರ ನೇಮಕಾತಿ ಪ್ರಕ್ರಿಯೆ ತಕ್ಷಣವೇ ಆರಂಭಿಸಬೇಕು. ಅಂಕಪಟ್ಟಿ ಪ್ರಕರಣದ ಸುತ್ತಮುತ್ತ ನಡೆದಿರುವ ಭ್ರಷ್ಟಾಚಾರದ ಸಮಗ್ರ ತನಿಖೆಯಾಗಲಿ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಂಕಪಟ್ಟಿ ಖರೀದಿಯ ಸ್ವಾಯತ್ತತೆಯನ್ನು ಆಯಾ ವಿವಿಗಳಿಗೆ ಬಿಡಬೇಕು. ಲ್ಯಾಪ್‍ಟಾಪ್ ಹಗರಣದ ಸೂಕ್ತ ತನಿಖೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು. 

ಎಬಿವಿಪಿ ತಾಲೂಕು ಸಂಚಾಲಕ ಅಭಿಜಿತ್ ಗುತ್ತಿ, ಸಹಸಂಚಾಲಕ ದರ್ಶನ್ ತೋಳೂರು, ಜಿಲ್ಲಾ ಸಂಚಾಲಕ ದೀಕ್ಷಿತ್ ಹಾಗೂ ಸುನಿಲ್, ಎಚ್.ಜೆ.ಅಭಿಜಿತ್, ಮೇಘ, ವೈಭವ್, ವೈಶಾಕ್, ಅಕ್ಷಯ್, ಯಶ್ವಂತ್, ಕಿರಣ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News