ಮಹಾದಾಯಿ ವಿವಾದ ಇತ್ಯರ್ಥಕ್ಕೆ ಸರಕಾರ ಸಿದ್ಧ : ಸಚಿವ ಎಂ.ಬಿ.ಪಾಟೀಲ್

Update: 2017-12-22 12:45 GMT

ಬೆಂಗಳೂರು, ಡಿ. 22: ರಾಜಕೀಯವನ್ನು ಬದಿಗಿಟ್ಟು ಕಳಸಾ-ಬಂಡೂರಿ, ಮಹಾದಾಯಿ ವಿವಾದ ಬಗೆಹರಿಸಲು ರಾಜ್ಯ ಸರಕಾರ ಸಿದ್ಧವಿದೆ. ಗೋವಾ ಸರಕಾರ ಎಲ್ಲೇ ಸಭೆ ಕರೆದರೂ ನಾವು ಪಾಲ್ಗೊಳ್ಳಲು ಸಿದ್ಧ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಉಭಯ ಸರಕಾರಗಳು ಒಟ್ಟಾಗಿ ಚರ್ಚಿಸಿ 7.56 ಟಿಎಂಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಉಳಿದ ವಿವಾದವನ್ನು ನ್ಯಾಯಮಂಡಳಿಯಲ್ಲಿ ಬಗೆಹರಿಸಬಹುದು. ವಿಳಂಬ ಮಾಡದೆ ಸಮಸ್ಯೆ ಬಗೆಹರಿಸಲು ಗೋವಾ ಸರಕಾರ ಮುಂದಾಗಬೇಕೆಂದು ಪಾಟೀಲ್ ಸಲಹೆ ಮಾಡಿದರು.

ಗೋವಾದವರು ನಾಳೆಯೇ ಸಭೆ ಕರೆದರೂ ಹೋಗಲು ಸಿದ್ಧ. ಶಿಷ್ಟಾಚಾರ ಪ್ರಕಾರ ಅಲ್ಲಿನ ಸಿಎಂ ನಮ್ಮ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಬೇಕಿತ್ತು. ಆದರೂ, ಅದನ್ನು ಪ್ರತಿಷ್ಠೆಯಾಗಿ ಪರಿಗಣಿಸದೆ ಅವರೊಂದಿಗೆ ಚರ್ಚೆಗೆ ಹೋಗುತ್ತೇವೆ. ಗೋವಾ ಸರಕಾರಕ್ಕೆ ಪತ್ರ ಬರೆಯುವಂತೆ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಗೋವಾ ಸಿಎಂ ಶಿಷ್ಟಾಚಾರದ ಪ್ರಕಾರ ಕರ್ನಾಟಕ ಸಿಎಂಗೆ ಪತ್ರ ಬರೆಯಬೇಕಿತ್ತು. ಆದರೆ, ಯಡಿಯೂರಪ್ಪಅವರಿಗೆ ಪತ್ರ ಬರೆದಿದ್ದಾರೆ. ಆದರೂ ಕರ್ನಾಟಕ ಸರಕಾರಕ್ಕೆ ಯಾವುದೆ ಪ್ರತಿಷ್ಠೆ ಇಲ್ಲ. ಸಭೆಗೆ ಯಾವುದೆ ಸ್ಥಳ, ಯಾವುದೇ ದಿನಾಂಕ, ಸಮಯ ನೀಡಿದರೂ ಚರ್ಚೆಗೆ ಸಿಎಂ ಸಿದ್ಧ.

ನಮ್ಮ ಪಾಲಿನ 7.56 ಟಿಎಂಸಿ ನೀರನ್ನ ಬಳಿಸಿಕೊಳ್ಳಲು ತುರ್ತಾಗಿ ಅನುವು ಮಾಡಿಕೊಡಬೇಕು. ರೈತರ ಹಿತದೃಷ್ಟಿಯಿಂದ ತಕ್ಷಣ ಎರಡು ಮೂರು ದಿನದಲ್ಲಿ ಸಭೆ ಕರೆಯಬೇಕು. ಎಲ್ಲ ಕಾರ್ಯಕ್ರಮ ರದ್ದುಗೊಳಿಸಿ ಸಿಎಂ ಸಭೆಯಲ್ಲಿ ಭಾಗವಹಿಸಲು ಸಿದ್ಧ. ಈ ವಿಚಾರದಲ್ಲಿ ರೈತ ಮುಖಂಡರ ಭಾವನೆಗೆ ತಲೆಬಾಗುತ್ತೇವೆ ಎಂದು ಹೇಳಿದರು.

ಮಹಾದಾಯಿ ವಿಚಾರದಲ್ಲಿ ರಾಜಕೀಯ ಹಾಗೂ ಕಾಲಹರಣ ಮಾಡಬಾರದು. ಬಿಜೆಪಿಯವರು ಅದನ್ನು ರಾಜಕೀಯವಾಗಿ ಬಳಸಿಕೊಳ್ಳದೇ ತಕ್ಷಣ ಸಭೆ ಆಯೋಜನೆ ಮಾಡಬೇಕು. ಜನ-ರೈತರ ವಿಚಾರದಲ್ಲಿ ರಾಜ್ಯ ಸರಕಾರ ಸರಕಾರಕ್ಕೆ ಪ್ರತಿಷ್ಠೆಯಿಲ್ಲ. ಜನತೆ ಹಿತ ಮುಖ್ಯ ಎಂದು ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News