ಜ.4ರಿಂದ ಅರಕಲಗೂಡಿನಲ್ಲಿ ರಾಜ್ಯಮಟ್ಟದ ಪಶು ಮೇಳ: ಪಶುಸಂಗೋಪನಾ ಸಚಿವ ಎ.ಮಂಜು

Update: 2017-12-22 12:47 GMT

ಬೆಂಗಳೂರು, ಡಿ. 22: ರಾಜ್ಯದಲ್ಲಿ ಇದೇ ಮೊದಲಬಾರಿಗೆ ಪಶು ಸಂಗೋಪನಾ ಇಲಾಖೆ ಹಾಸನ ಜಿಲ್ಲೆ ಅರಕಲಗೂಡಿನಲ್ಲಿ 2018ರ ಜ.4ರಿಂದ ಮೂರು ದಿನಗಳ ಕಾಲ ‘ರಾಜ್ಯ ಮಟ್ಟದ ಪಶು ಮೇಳ’ ಏರ್ಪಡಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಎ.ಮಂಜು ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶು ಸಂಗೋಪನೆಯಲ್ಲಿ ನೂತನ ಸಂಶೋಧನೆ-ಆವಿಷ್ಕಾರಗಳನ್ನು ರೈತರಿಗೆ ಪರಿಚಯಿಸಲು ಹಾಗೂ ಹೊಸ ತಳಿಗಳ ಬಗ್ಗೆ ಮಾಹಿತಿ ನೀಡುವುದಲ್ಲದೆ, ಜಾನುವಾರುಗಳು, ಕುರಿ-ಮೇಕೆ, ಎಮ್ಮೆ ಹಾಗೂ ದೇಶಿ ಕೋಳಿ ತಳಿಗಳನ್ನು ಪ್ರದರ್ಶಿಸಲಾಗುವುದು ಎಂದರು.

ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿ ಪಾರಂಪರಿಕ ಹಾಗೂ ಜಾನಪದ ಕ್ರೀಡೆಯಾದ ‘ಕಂಬಳ ಕೋಣಗಳ’ ಪ್ರದರ್ಶನ, ಕರುಗಳ ಪ್ರದರ್ಶನವೂ ನಡೆಯಲಿದೆ ಎಂದ ಅವರು, ಹಾಲು ಕರೆಯುವ ಸ್ಪರ್ಧೆ ಇದ್ದು, ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಕ್ರಮವಾಗಿ 1ಲಕ್ಷ ರೂ., 50 ಸಾವಿರ ರೂ. ಹಾಗೂ 30ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಮೇಳದಲ್ಲಿ 300 ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದ್ದು, ರೈತರಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಜಾನುವಾರುಗಳಿಗೂ ಉಚಿತ ನೀರು, ಮೇವು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗಿದೆ. ಮೇಳದಲ್ಲಿ ಪಾಲ್ಗೊಳ್ಳುವ ಜಾನುವಾರುಗಳಿಗೆ 10 ಕೆಜಿ ಪಶು ಆಹಾರ, ಸಾರ್ವಜನಿಕರಿಗೆ ಉಚಿತವಾಗಿ ಬೇಯಿಸಿದ ಮೊಟ್ಟೆ, ಹಾಲು-ಮಜ್ಜಿಗೆ ನೀಡಲಾಗುವುದು ಎಂದು ಹೇಳಿದರು.

ಅರಕಲಗೂಡು ತಾಲೂಕು ಕ್ರೀಡಾಂಗಣದಲ್ಲಿ ಜ.4ರ ಮಧ್ಯಾಹ್ನ 2ಗಂಟೆಗೆ ಸಿಎಂ ಸಿದ್ದರಾಮಯ್ಯ ಪಶುಮೇಳಕ್ಕೆ ಚಾಲನೆ ನೀಡಲಿದ್ದು, ರೈತರಲ್ಲಿ ಆತ್ಮವಿಶ್ವಾಸ ಮೂಡಿಸಲು ಹೈನುಗಾರಿಕೆ ಸಹಕಾರಿ. ಅಲ್ಲದೆ, ಆರ್ಥಿಕ ಸದೃಢೀಕರಣಕ್ಕೆ ನೆರವಾಗಲಿದೆ ಎಂದು ಹೇಳಿದರು.

‘ನೂತನ ವರ್ಷಕ್ಕೆ ರಾಜ್ಯದಲ್ಲಿನ ಪಶು ವೈದ್ಯರ ಸಮಸ್ಯೆ ಬಗೆಹರಿಯಲಿದ್ದು, ಪಶು ಆಸ್ಪತ್ರೆಗಳ ವೈದ್ಯರ ಹುದ್ದೆ ಭರ್ತಿ ಮಾಡಲಾಗುವುದು. ಹೊಸ ವರ್ಷದಲ್ಲಿ 666 ಪಶು ವೈದ್ಯರ ನೇಮಕಾತಿ ಪತ್ರವನ್ನು ನೀಡಲಾಗುವುದು. ಅಲ್ಲದೆ, 1512 ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ರಾಜ್ಯದ ಎಲ್ಲ ಪಶುಸಂಗೋಪನಾ ಕಾಲೇಜುಗಳಿಗೂ ಮಾನ್ಯತೆ ಸಿಕ್ಕಿದೆ’
-ಎ.ಮಂಜು ಪಶು, ಸಂಗೋಪನಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News