×
Ad

ಬಿಜೆಪಿಯಿಂದ ಉತ್ತರ ಕರ್ನಾಟಕದ ಜನತೆಗೆ ಅನ್ಯಾಯ: ಬಸವರಾಜ ಹೊರಟ್ಟಿ

Update: 2017-12-22 18:31 IST

ಬೆಂಗಳೂರು, ಡಿ.22: ಮಹಾದಾಯಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಬರೆದಿರುವ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ನಿನ್ನೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಓದುವ ಅವಶ್ಯಕತೆ ಇರಲಿಲ್ಲ. ಇದೊಂದು ರಾಜಕೀಯ ಗಿಮಿಕ್ ಹಾಗೂ ಉತ್ತರ ಕರ್ನಾಟಕದ ಜನತೆಗೆ ಬಿಜೆಪಿ ಮಾಡಿದ ಅನ್ಯಾಯ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.

ಮನೋಹರ್ ಪಾರಿಕ್ಕರ್ 7.56 ಟಿಎಂಸಿ ಕುಡಿಯುವ ನೀರು ಕೊಡುವುದಾಗಿ ಪತ್ರದಲ್ಲಿ ಎಲ್ಲಿಯೂ ಹೇಳಿಲ್ಲ. ಕುಡಿಯುವ ನೀರಿನ ಅಗತ್ಯತೆ ಅರಿತು ಮಾನವೀಯ ನೆಲೆಯಲ್ಲಿ ಎಷ್ಟು ಅವಶ್ಯವೆಂಬುದನ್ನು ಮನವರಿಕೆ ಮಾಡಿಕೊಂಡು ನ್ಯಾಯಾಧೀಕರಣದ ವ್ಯಾಪ್ತಿಯಡಿ ಚರ್ಚಿಸಿ ನೀರು ಬಿಡುಗಡೆಯ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆಯೆ ಹೊರತು, ಬಿಡುಗಡೆಗೆ ಸಮ್ಮತಿ ಎಂದು ಹೇಳಿಲ್ಲ. ಇದಲ್ಲದೆ, ಗೋವಾದ ನೀರಾವರಿ ಸಚಿವರು ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿರುವುದನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಹೊರಟ್ಟಿ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂವಿಧಾನದ ಮಾನ್ಯತೆ ಸಿಗಬೇಕಾದರೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ನ್ಯಾಯಾಧೀಕರಣದ ಹೊರಗಡೆ ಈ ಕುರಿತು ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಬೇಕು. ಅದನ್ನು ಬಿಟ್ಟು ಹೀಗೆ ಚರ್ಚೆ ಮಾಡಿದರೆ ಮಾನ್ಯತೆ ಸಿಗುತ್ತದೆಯೇ? ಅಲ್ಲದೇ ಒಂದು ರಾಜ್ಯದ ಮುಖ್ಯಮಂತ್ರಿ ಸಂವಿಧಾನಾತ್ಮಕ ಹುದ್ದೆ ಹೊಂದಿರದ ವ್ಯಕ್ತಿಗಳಿಗೆ ಪತ್ರ ಬರೆದದ್ದನ್ನು ನೋಡಿದರೆ ಈ ಪತ್ರದ ಹಿಂದೆ ಚುನಾವಣಾ ರಾಜಕೀಯದ ವಾಸನೆ ಹೊಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಹಾಗೂ ಈಗಿನ ಮುಖ್ಯಮಂತ್ರಿಗಳು ಬರೆದ ಪತ್ರಕ್ಕೆ ಉತ್ತರ ನೀಡದ ಗೋವಾ ಮುಖ್ಯಮಂತ್ರಿ, ಈಗ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿರುವುದನ್ನು ನೋಡಿದರೆ ಇದರ ಹಿಂದೆ ಸದುದ್ದೇಶ ಇಲ್ಲವೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಹೀಗಾಗಿ, ಕೇವಲ ಪತ್ರವನ್ನು ಓದಿದರೆ ನೀರು ತಂದ ಹಾಗೆ ಅಲ್ಲ. ಆದರೆ, ಜನರನ್ನು ಈ ರೀತಿ ಮೂರ್ಖರನ್ನಾಗಿ ಮಾಡುವುದು ಸರಿಯಲ್ಲ. ಯಾರಾದರೂ ಇದನ್ನು ಒಪ್ಪುತ್ತಾರೆಯೇ, ಏನಾದರೂ ಮಾಡಲು ಒಂದು ಕಾನೂನು ಬೇಕಲ್ಲವೇ? ಅವರು ಬರೆದಿರುವ ಪತ್ರವನ್ನು ಜನರ ಮುಂದೆ ಓದಿದರೆ ನೀರು ಬಿಡಲು ಸಾಧ್ಯವೇ? ಹಾಗಿದ್ದರೆ ನಾಳೆ ನೀರು ಬಿಟ್ಟು ತೋರಿಸಲಿ ಎಂದು ಬಿಜೆಪಿ ನಾಯಕರಿಗೆ ಅವರು ಸವಾಲು ಹಾಕಿದರು.

ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಈಶ್ವರಪ್ಪ ಹಾಗೂ ಬಿಜೆಪಿಯ ಇತರ ಸಚಿವರು ಕಳಸಾ ಬಂಡೂರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಕುರಿತು ಚರ್ಚೆ ನಡೆಸಿದಾಗ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನುಮತಿ ಇಲ್ಲದ ಈ ಯೋಜನೆಗೆ ಶಂಕುಸ್ಥಾಪನೆ ಮಾಡುವುದು ಸಮಂಜಸವಲ್ಲವೆಂದು ತಿಳಿಸಿದರೂ ಡಿಸಿಎಂ ಆಗಿದ್ದ ಯಡಿಯೂರಪ್ಪ ಹಾಗೂ ಈಶ್ವರಪ್ಪ ಹಠ ಹಿಡಿದು ಅನುಮೋದನೆ ಇಲ್ಲದ ಕಾಮಗಾರಿಗೆ ಅಡಿಗಲ್ಲು ಹಾಕಿದರು ಎಂದು ಹೊರಟ್ಟಿ ದೂರಿದರು.

ಯಡಿಯೂರಪ್ಪ ಚುನಾವಣೆ ಹಾಗೂ ರಾಜಕೀಯ ಕಾರಣಗಳಿಗಾಗಿ ಇತಿಹಾಸ ತಿರುಚಿ, ಜನರಿಗೆ ತಪ್ಪು ಸಂದೇಶ ಕೊಟ್ಟು ಅದನ್ನೇ ಸತ್ಯವೆಂಬಂತೆ ಬಿಂಬಿಸುವ ಕೆಲಸ ಮಾಡಬಾರದು. ಈ ಸಮಸ್ಯೆಗೆ ಒಂದೇ ಪರಿಹಾರವೆಂದರೆ ಪ್ರಧಾನಮಂತ್ರಿ, ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಅವರನ್ನು ಒಪ್ಪಿಸಿ ಮಹಾದಾಯಿಯಿಂದ ಸದ್ಯ 7.56 ಟಿಎಂಸಿ ನೀರನ್ನು ಬಿಡಿಸಲು ಸ್ಪಷ್ಟ ನಿರ್ಧಾರ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಅಲ್ಲದೆ, ಮುಂದೆ ರಾಜ್ಯಕ್ಕೆ ಎಷ್ಟು ನೀರು ಬರಬೇಕೋ ಅಂದಾಜು 36 ರಿಂದ 39 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ಅದಕ್ಕೆ ನ್ಯಾಯಾಧೀಕರಣದಲ್ಲಿ ಎಲ್ಲ ರೀತಿಯಿಂದ ಪ್ರಯತ್ನಿಸಬೇಕು. ರಾಜಕಾರಣಿಗಳು ಜನರ ಕಷ್ಟಕ್ಕೆ ಸ್ಪಂದಿಸಬೇಕೆ ವಿನಃ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News